

ಮುಂಬೈ: ಕೊನೆಗೂ ಮಧ್ಯಪ್ರವೇಶ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ, ಹಾಲಿ ನಾಯಕ ಹಾರ್ದಿಕ್ ಪಾಂಡ್ಯರನ್ನು ನೋಡಿ ಗೇಲಿ ಮಾಡದಂತೆ ವಾಂಖೆಡೆ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳ ಬಳಿ ಮನವಿ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಲ್ ನಾಯಕತ್ವ ಬದಲಾವಣೆ ಆದಾಗಿನಿಂದ ಮುಂಬೈ ತಂಡದಲ್ಲಿ ಎಲ್ಲವೂ ಸರಿಯಿಲ್ಲ. ರೋಹಿತ್ರಿಂದ ನಾಯಕತ್ವ ಕಸಿದು ಹಾರ್ದಿಕ್ ಪಾಂಡ್ಯಗೆ ನೀಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಹಾರ್ದಿಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳು ನಡೆಯುತ್ತಿವೆ. ಗುಜರಾತ್ ಟೈಟಾನ್ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ನಾಯಿ ನುಗ್ಗಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಬಹುತೇಕರು ಹಾರ್ದಿಕ್ ಹೆಸರನ್ನು ಕೂಗುವ ಮೂಲಕ ಅವಮಾನ ಮಾಡಿದ್ದರು. ಅಲ್ಲದೆ, ಎಲ್ಇಡಿ ಪರದೆ ಮೇಲೆ ಹಾರ್ದಿಕ್ ಬಂದಾಗಲೆಲ್ಲ ಬೂ ಎಂದು ಕೂಗುವ ಮೂಲಕ ಅಪಹಾಸ್ಯ ಮಾಡುತ್ತಿದ್ದರು. ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲೂ ಇದು ಮರುಕಳಿಸಿತ್ತು. ಇದನೆಲ್ಲ ರೋಹಿತ್ ಅಭಿಮಾನಿಗಳು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.
ಇದೀಗ ಮಧ್ಯ ಪ್ರವೇಶ ಮಾಡಿರುವ ರೋಹಿತ್, ಬೌಂಡರಿ ಲೈನ್ ಬಳಿ ನಿಂತು ಬೂ ಎಂದು ಕೂಗದಂತೆ ಅಭಿಮಾನಿಗಳನ್ನು ಒತ್ತಾಯಿಸಿದ್ದಾರೆ. ನಿನ್ನೆ (ಏಪ್ರಿಲ್ 1) ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ ವಿರುದ್ಧ ನಡೆದ ಪಂದ್ಯದ ವೇಳೆ ಬೌಂಡರಿ ಗೆರೆಯ ಬಳಿ ನಿಂತಿದ್ದ ವೇಳೆ ಕೈ ಮೂಲಕ ಸನ್ನೆ ಮಾಡುವ ಮೂಲಕ ಸಾಕು ನಿಲ್ಲಿಸಿ ಎಂದು ಕೈಮುಗಿದು ಅಭಿಮಾನಿಗಳ ಬಳಿ ರೋಹಿತ್ ಮನವಿ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ರೋಹಿತ್ ನಡೆಯನ್ನು ಮೆಚ್ಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಸಹ ಸುಮ್ಮನೇ ಇರುವಂತೆ ಮುಂಬೈ ಅಭಿಮಾನಿಗಳನ್ನು ಒತ್ತಾಯಿಸಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ನಿನ್ನೆ (ಏಪ್ರಿಲ್ 1) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 14ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಲ್ರೌಂಡ್ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿತು. ಟಾಸ್ ಗೆದ್ದ ರಾಜಸ್ಥಾನ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಅದರಂತೆ ನಾಯಕ ಹಾರ್ದಿಕ್ ಪಾಂಡ್ಯ (34 ರನ್, 21 ಎಸೆತ, 6 ಬೌಂಡರಿ), ತಿಲಕ್ ವರ್ಮಾ (32 ರನ್, 29 ಎಸೆತ, 2 ಸಿಕ್ಸರ್) ಪ್ರತಿರೋಧದ ನಡುವೆಯೂ 20 ಓವರ್ಗಳಲ್ಲಿ 125ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
126ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ರಾಯಲ್ಸ್ ತಂಡದ ಪರವಾಗಿ ರಿಯಾನ್ ಪರಾಗ್ (54 ರನ್, 39 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಫಲವಾಗಿ15.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. (ಏಜೆನ್ಸೀಸ್)