ಮುಂಬೈ ಇಂಡಿಯನ್ಸ್​ ತಂಡದ ಬಸ್ ಡ್ರೈವರ್​ ಆದ ರೋಹಿತ್​ ಶರ್ಮ! ವಿಡಿಯೋ ವೈರಲ್​

Rohit Sharma
Published on

ಮುಂಬೈ: ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವ ಕಳೆದುಕೊಂಡ ಬಳಿಕ ರೋಹಿತ್​ ಶರ್ಮ ತುಂಬಾ ಬದಲಾಗಿದ್ದಾರೆ. ಇದುವರೆಗೂ ಗಂಭೀರವಾಗಿರುತ್ತಿದ್ದ ರೋಹಿತ್,​ ಇದೀಗ ಹೆಚ್ಚು ಫನ್​ ಮೂಡ್​ನಲ್ಲಿ ಇರುತ್ತಾರೆ. ಇಂದು (ಏಪ್ರಿಲ್​ 14) ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿರುವ ಐಪಿಎಲ್​ ಪಂದ್ಯಕ್ಕೂ ಮುನ್ನವೇ ರೋಹಿತ್​ ಬಸ್ ಚಾಲಕನ ಅವತಾರ ತಾಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಸೀಸಸ್​ನಲ್ಲಿ ಮುಂಬೈ ಇಂಡಿಯನ್ಸ್ ಆಡಿದ ಮೊದಲ ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ವಿಚಾರದಲ್ಲಿ ಸ್ವಲ್ಪ ಅತಿಯಾಗಿ ವರ್ತಿಸಿದ್ದರು. ರೋಹಿತ್ ಅವರನ್ನು ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುವಂತೆ ಆರ್ಡರ್​ ಮಾಡಿದರು. ತುಂಬಾ ಹಿರಿಯ ಆಟಗಾರ ಮತ್ತು ಮಾಜಿ ನಾಯಕ ಎಂದು ಸಹ ನೋಡಲಿಲ್ಲ. ಇದರಿಂದಾಗಿ ರೋಹಿತ್ ಅಭಿಮಾನಿಗಳು ಪಾಂಡ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನಾಯಕನಾಗಿ ಪಾಂಡ್ಯ ಮಾಡಿದ ಪ್ರಮಾದಗಳು ಮುಂಬೈ ಅಭಿಮಾನಿಗಳ ಕೋಪಕ್ಕೆ ಕಾರಣವಾಯಿತು. ಇದರಿಂದ ಎಚ್ಚೆತ್ತುಕೊಂಡ ಹಾರ್ದಿಕ್​, ರೋಹಿತ್ ಜತೆ ಮಾತನಾಡಿ ಪಂದ್ಯದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಫೀಲ್ಡ್ ಸೆಟ್ ಹಾಗೂ ಬೌಲಿಂಗ್ ಬದಲಾವಣೆ ಬಗ್ಗೆ ರೋಹಿತ್ ಜೊತೆ ಚರ್ಚಿಸಲು ಆರಂಭಿಸಿದರು. ಇದಾದ ಬಳಿಕ ಅಭಿಮಾನಿಗಳು ಸ್ವಲ್ಪ ಶಾಂತರಾದರು. ಆದರೆ, ನಾಯಕತ್ವದ ಹೊಣೆಗಾರಿಕೆ ಇಲ್ಲದ ಕಾರಣ ರೋಹಿತ್ ಶರ್ಮಾ ಕೊಂಚ ತಣ್ಣಗಾದಂತಿದೆ. ಹಾಗಾಗಿಯೇ ಸದಾ ಸೀರಿಯಸ್ ಆಗಿರುತ್ತಿದ್ದ ರೋಹಿತ್ ಇತ್ತೀಚಿಗೆ ತುಂಬಾ ತಮಾಷೆ ಮಾಡುತ್ತಿದ್ದಾರೆ.

ಈ ಕ್ರಮದಲ್ಲಿ ರೋಹಿತ್​ ಅವರು ಮುಂಬೈ ಇಂಡಿಯನ್ಸ್ ತಂಡದ ಬಸ್ಸಿನ ಚಾಲಕರಾದರು. ತಂಡದ ಆಟಗಾರರು ಬಸ್​ ಏರುವಾಗ ರೋಹಿತ್​ ಡ್ರೈವರ್​ ಸೀಟಿನಲ್ಲಿ ಕುಳಿತು ಕ್ಯಾಮೆರಾಗೆ ಪೋಸ್​ ನೀಡುವ ಮೂಲಕ ಫನ್​ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೇ ಸಂದರ್ಭದಲ್ಲಿ ಈ ಸೀಸನ್​ನಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಐದು ಪಂದ್ಯಗಳಿಂದ ಎರಡು ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಪ್ರಸ್ತುತ 7ನೇ ಸ್ಥಾನದಲ್ಲಿದೆ. ಭಾನುವಾರ ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಈ ಎರಡು ತಂಡಗಳು ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವುದು ಗೊತ್ತೇ ಇದೆ. ಎರಡು ಚಾಂಪಿಯನ್ ತಂಡಗಳ ನಡುವಿನ ಪಂದ್ಯವಾಗಿರುವುದರಿಂದ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net