ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ 2ನೇ ಮದ್ವೆಗೆ ರೆಡಿಯಾದ್ರೂ ರಜಿನಿ ಪುತ್ರಿ ಐಶ್ವರ್ಯಾ! ವರನ್ಯಾರು ಗೊತ್ತೇ?

Dhanush
Published on

ಚೆನ್ನೈ: ವಿಚ್ಛೇದನ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ ಮಾಜಿ ತಾರಾದಂಪತಿ ನಟ ಧನುಷ್​ ಹಾಗೂ ಸೂಪರ್​ಸ್ಟಾರ್​ ರಜಿನಿಕಾಂತ್​ ಪುತ್ರಿ ಐಶ್ವರ್ಯಾ ರಜಿನಿಕಾಂತ್​ ಇತ್ತೀಚೆಗಷ್ಟೇ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಕೊನೆಗೂ ತಮ್ಮ ಡಿವೋರ್ಸ್​ಗೆ ಅಧಿಕೃತ ಮುದ್ರೆ ಹೊತ್ತಲು ಮುಂದಾಗಿದ್ದಾರೆ. ಇಬ್ಬರು ಮತ್ತೆ ಒಂದಾಗಬಹುದು ಎಂಬ ಅಭಿಮಾನಿಗಳ ಆಸೆಗೆ ಮಾಜಿ ತಾರಾ ದಂಪತಿ ತಣ್ಣೀರು ಎರೆಚಿದ್ದಾರೆ.

ತಾಜಾ ಸಂಗತಿ ಏನೆಂದರೆ, ಐಶ್ವರ್ಯಾ ರಜಿನಿಕಾಂತ್​ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್​ ಅಂಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಅಂದಹಾಗೆ ಐಶ್ವರ್ಯಾ, ತಮ್ಮ ಮಾಜಿ ಪತಿ ಧನುಷ್​ ನಟನೆಯ 3 ಚಿತ್ರದ ಮೂಲಕ ನಿರ್ದೇಶಕಿಯಾಗಿ ತಮಿಳು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಇದರಲ್ಲಿ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಥ್ರೀ ಸಿನಿಮಾ ಜನರಿಂದ ಅಷ್ಟಾಗಿ ಮೆಚ್ಚುಗೆ ಗಳಿಸಿದಿದ್ದರೂ ಯುವಜನರನ್ನು ಸೆಳೆಯಿತು. ಆ ನಂತರ ಕೆಲ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಐಶ್ವರ್ಯಾ, ಲಾಲ್ ಸಲಾಂ ಎಂಬ ಚಿತ್ರವನ್ನು ನಿರ್ದೇಶನ ಮಾಡಿದರು. ಈ ಚಿತ್ರದಲ್ಲಿ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೆ ಐಶ್ವರ್ಯಾ, ಸಾಮಾಜಿಕ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕತೆಯೊಂದನ್ನು ಬರೆದಿದ್ದು, ಆ ಕತೆಯನ್ನು ನಟ ಸಿದ್ಧಾರ್ಥ್​ಗೆ ಹೇಳಿರುವುದಾಗಿ ವರದಿಯಾಗಿದೆ.

ಇದರ ನಡುವೆ ಇತ್ತೀಚೆಗಷ್ಟೇ ಧನುಷ್ ಮತ್ತು ಐಶ್ವರ್ಯ ಇಬ್ಬರೂ ಕೌಟುಂಬಿಕ ನ್ಯಾಯಾಲಯದಲ್ಲಿ ಔಪಚಾರಿಕವಾಗಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ವಿಚಾರ ಕಳೆದ ಕೆಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ರಜನಿಕಾಂತ್ ಕುಟುಂಬ, ಐಶ್ವರ್ಯಾಗೆ ಎರಡನೇ ಮದುವೆ ಮಾಡಲು ನಿರ್ಧರಿಸಿದೆ ಎಂಬ ಮಾತುಗಳು ಕಾಲಿವುಡ್ ಮೂಲಗಳಿಂದ ಕೇಳಿಬಂದಿದೆ. ಸಹಾಯಕ ನಿರ್ದೇಶಕನ ಪ್ರೀತಿಯಲ್ಲಿ ಐಶ್ವರ್ಯಾ ಬಿದ್ದಿದ್ದಾರೆ ಮತ್ತು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಇದು ಕಾಲಿವುಡ್​ನಲ್ಲಿ ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ ಸಂಗತಿ.

ಅಂದಹಾಗೆ ಧನುಷ್​ ಸ್ಟಾರ್​ ನಟನಾಗಿ ಮಿಂಚುತ್ತಿದ್ದ ಕಾಲದಲ್ಲೇ ಐಶ್ವರ್ಯಾ ಪ್ರೀತಿಯ ಬಲೆಯಲ್ಲಿ ಬಿದ್ದರು. ಐಶ್ವರ್ಯಾ, ಧನುಷ್​ಗಿಂತ ಹಿರಿಯಳು. ಐಶ್ವರ್ಯಾ ಮತ್ತು ಧನುಷ್​ 2004ರಲ್ಲಿ ಮದುವೆಯಾದರು. ದಂಪರಿಗೆ ಯಾತ್ರಾ ಮತ್ತು ಲಿಂಗ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ

2022ರ ಜನವರಿ 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ಖಚಿತಪಡಿಸಿದ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದರು. ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿ, ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದರು.

ಐಶ್ವರ್ಯಾ ಕೂಡ ಪ್ರತಿಕ್ರಿಯೆ ನೀಡಿ, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net