

ಚೆನ್ನೈ: ಇಬ್ಬರು ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ ಮಾಜಿ ತಾರಾದಂಪತಿಯಾದ ನಟ ಧನುಷ್ ಹಾಗೂ ಸೂಪರ್ಸ್ಟಾರ್ ರಜಿನಿಕಾಂತ್ ಪುತ್ರಿ ಐಶ್ವರ್ಯಾ ರಜಿನಿಕಾಂತ್ ಇತ್ತೀಚೆಗಷ್ಟೇ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿರುವುದಾಗಿ ಆಪ್ತ ಮೂಲಗಳು ತಿಳಿಸಿವೆ.
ಪರಸ್ಪರ ಒಪ್ಪಿಗೆ ಮೇರೆಗೆ ಸೆಕ್ಷನ್ 13 ಬಿ ಅಡಿಯಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ತಾವಿಬ್ಬರು ಒಪ್ಪಿ ಬೇರೆಯಾಗುತ್ತಿರುವುದಾಗಿ 2022ರ ಜನವರಿಯಲ್ಲಿ ಸಾಮಾಜಿಕ ಜಾಲತಾಣ ಮೂಲಕ ಘೋಷಣೆ ಮಾಡಿದ್ದರು. ಆ ಸಮಯದಲ್ಲಿ ಈ ಸಂಗತಿ ಅಭಿಮಾನಿಗಳಿಗೆ ಭಾರಿ ಆಘಾತವನ್ನು ಉಂಟುಮಾಡಿತು. ಸುಮಾರು ಎರಡು ವರ್ಷಗಳ ಬಳಿಕ ಇಬ್ಬರು ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.
ಶೀಘ್ರದಲ್ಲೇ ಇಬ್ಬರ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯಲಿದೆ. ತಮ್ಮ ಮಕ್ಕಳಾದ ಯಾತ್ರ ಮತ್ತು ಲಿಂಗ ಅವರ ಶಾಲಾ ಕಾರ್ಯಕ್ರಮಗಳಲ್ಲಿ ಮಾತ್ರ ಇಬ್ಬರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.
2022ರ ಜನವರಿ 17 ರಂದು ಟ್ವೀಟ್ ಮೂಲಕ ಡಿವೋರ್ಸ್ ಖಚಿತಪಡಿಸಿದ ಧನುಷ್, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್ ಟ್ವೀಟ್ ಮಾಡಿದ್ದರು. ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿ, ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದರು.
ಐಶ್ವರ್ಯಾ ಕೂಡ ಪ್ರತಿಕ್ರಿಯೆ ನೀಡಿ, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು.
ಡಿವೋರ್ಸ್ ಘೋಷಣೆ ಬಳಿಕ ಕಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಯಾಯಿತು. ಆದರೆ, ಇದ್ಯಾವುದಕ್ಕೂ ಕಿವಿಗೊಡದೆ ಐಶ್ವರ್ಯಾ ಮತ್ತು ಧನುಷ್ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾದರು. ಐಶ್ವರ್ಯಾ ನಿರ್ದೇಶನದ ಲಾಲ್ ಸಲಾಮ್ ಸಿನಿಮಾ ಕೆಲ ತಿಂಗಳುಗಳ ಹಿಂದಷ್ಟೇ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತು. ಧನುಷ್ ಕೂಡ ವಾಥಿ, ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲಿ ನಟಿಸಿದರು. ಇದೀಗ ರಾಯನ್ ಹೆಸರಿನ ಸಿನಿಮಾವನ್ನು ತಾವೇ ನಿರ್ದೇಶನ ಮಾಡುತ್ತಿದ್ದಾರೆ.
ಅಂದಹಾಗೆ ಐಶ್ವರ್ಯಾ ಮತ್ತು ಧನುಷ್ 2004ರ ನವೆಂಬರ್ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್ ನಡೆಸಿದ್ದರು. ದಂಪತಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್)