

ನವದೆಹಲಿ: ಲೋಕಸಭಾ ಚುನಾವಣೆ ಹೊತ್ತಲ್ಲಿ INDIA ಒಕ್ಕೂಟ ಮುನ್ನಡೆಸುತ್ತಿರುವ ಕಾಂಗ್ರೆಸ್ ಅಗ್ರನಾಯಕ ರಾಹುಲ್ ಗಾಂಧಿ ಅವರಿಗೆ ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ನೀಡಿರುವ ಸಲಹೆ ಸಾಕಷ್ಟ ಮಹತ್ವ ಪಡೆದುಕೊಂಡಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿರೀಕ್ಷಿತ ಫಲಿತಾಂಶ ಬರದಿದ್ದರೆ ರಾಹುಲ್ ಗಾಂಧಿ ಹಿಂದೆ ಸರಿಯುವ ಬಗ್ಗೆ ಯೋಚಿಸಬೇಕು ಎಂದು ಪ್ರಶಾಂತ್ ಅವರು ರಾಹುಲ್ಗಾಂಧಿಗೆ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಶಾಂತ್ 10 ವರ್ಷದಿಂದ ನೀವು ಒಂದೇ ಕೆಲಸ ಮಾಡುತ್ತಿದ್ದು, ಅದರಲ್ಲಿ ನೀವು ಯಶಸ್ವಿ ಆಗಲಿಲ್ಲ ಎಂದರೆ ಆ ಕೆಲಸವನ್ನು ಬಿಟ್ಟು ನೀವು ಹಿಂದೆ ಸರಿಯಬೇಕು. ಇಲ್ಲದಿದ್ದರೆ ಯಾರೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಪಕ್ಷದ ನಾಯಕತ್ವ ಸ್ಥಾನದಿಂದ ಹಿಂದೆ ಸರಿದು ಬೇರೆಯವರು ಮುನ್ನಡೆಸಲು ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.
ಕಳೆದ ಬಾರಿಯೂ ಅವರು ನಾಯಕತ್ವ ಸ್ಥಾನದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಆದರೆ ಅವರು ಅದನ್ನು ಮಾಡಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಬೇರೆಯವರು ಇದ್ದರೂ ರಾಹುಲ್ ಗಾಂಧಿ ಸಮ್ಮತಿ ಇಲ್ಲದೆ ಕಾಂಗ್ರೆಸ್ನಲ್ಲಿ ಏನೂ ನಡೆಯಲ್ಲ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರೇ ಖಾಸಗಿಯಾಗಿ ಈ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. ರಾಹುಲ್ ಗಾಂಧಿ ನಿರ್ಧಾರದಂತೆಯೇ ಪಕ್ಷದಲ್ಲಿ ನಡೆಯುವುದು ಎಂದು ನನ್ನ ಬಳಿ ಹೇಳಿದ್ದಾರೆ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ಸೋನಿಯಾರಿಂದ ಕಲಿಯಬೇಕು: 10 ವರ್ಷದಿಂದ ಮಾಡುತ್ತಿರುವ ಕೆಲಸ ಸಕ್ಸಸ್ ನೀಡಿಲ್ಲ ಎಂದರೆ ಬೇರೆಯವರಿಗೆ 5 ವರ್ಷ ಕೊಟ್ಟು ನೋಡಬೇಕು. ರಾಹುಲ್ ತಾಯಿ ಸೋನಿಯಾ ಗಾಂಧಿ ಆ ಕೆಲಸವನ್ನು ಮಾಡಿದ್ದರು. 1991 ರಲ್ಲಿ ಪಿ ವಿ ನರಸಿಂಹರಾವ್ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು ರಾಜಕೀಯದಿಂದ ದೂರ ಉಳಿದಿದ್ದರು. ಆ ಗುಣ ರಾಹುಲ್ಗೂ ಬರಬೇಕು. ವಿಶ್ವದ ದೊಡ್ಡ ನಾಯಕರಿಗೆ ತಾವು ಯಾವಾಗ ಹಿಂದೆ ಸರಿಯಬೇಕು ಎಂದು ತಿಳಿದಿರುತ್ತೆ. ಅದನ್ನು ರಾಹುಲ್ ಗಾಂಧಿ ಅರಿಯಬೇಕು. ಎಲ್ಲವೂ ತಿಳಿದಿದೆ ಅಂದುಕೊಳ್ಳಬಾರದು. ಯಾವಾಗ ಸಹಾಯದ ಅಗತ್ಯವಿದೆ ಎಂದು ರಾಹುಲ್ ಗಾಂಧಿ ತಿಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ಆರಂಭವಾಗಲಿದ್ದು, ಜೂನ್ 1ರಂದು ಕೊನೆಯ 7ನೇ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ 89 ಕ್ಷೇತ್ರಗಳಿಗೆ, ಮೂರನೇ ಹಂತದಲ್ಲಿ 94 ಕ್ಷೇತ್ರಗಳು, ನಾಲ್ಕನೇ ಹಂತದಲ್ಲಿ 96, ಐದನೇ ಹಂತದಲ್ಲಿ 49, ಆರನೇ ಹಂತದಲ್ಲಿ 57 ಮತ್ತು ಏಳನೇ ಹಂತದಲ್ಲಿ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.