

ನವದೆಹಲಿ: ಈ ವರ್ಷದಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯಲ್ಲಿ (IPL 2025) ಅತ್ಯಂತ ಕಳಪೆ ಪ್ರದರ್ಶನ ತೋರಿದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ತಮ್ಮದು ಐದು ಬಾರಿ ಚಾಂಪಿಯನ್ಸ್ ಪಟ್ಟ ಪಡೆದ ಬಲಿಷ್ಠ ತಂಡ ಎಂಬುದನ್ನು ಮರೆತು ಹೋಯಿತು ಎನ್ನುವಂತೆ ಫ್ಲಾಪ್ ಪ್ರದರ್ಶನ ನೀಡಿ, ಲೀಗ್ನಿಂದಲೇ ಹೊರಗುಳಿಯುವಂತೆ ಮಾಡಿದರು. ಅದರಲ್ಲೂ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿ, ಔಟ್ ಆಗಿದ್ದು ಎಂಐ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಐದು ಬಾರಿ ಚಾಂಪಿಯನ್ಸ್ ಪಟ್ಟಕ್ಕೆ ಏರಿಸಿದ ರೋಹಿತ್ರನ್ನು (Rohit Sharma) ಕೈಬಿಟ್ಟು ಹಾರ್ದಿಕ್ಗೆ ತಂಡದ ಕ್ಯಾಪ್ಟನ್ಸಿ ಕೊಟ್ಟ ದಿನದಿಂದಲೂ ಶರ್ಮ ಮುಂದುವರಿಕೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೇ ಭುಗಿಲೆದ್ದಿದೆ.
36 ವರ್ಷದ ರೋಹಿತ್ ಶರ್ಮ 2011ರಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದು, ನಾಯಕರಾಗಿ ತಂಡಕ್ಕೆ 5 ಬಾರಿ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಇದರೊಟ್ಟಿಗೆ ಟೂರ್ನಿ ಇತಿಹಾಸದಲ್ಲಿ ತಂಡದ ಪರ ಗರಿಷ್ಠ ರನ್ ಬಾರಿಸಿದ ಮತ್ತು ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ. ಆದರೆ ಈ ಬಾರಿ ರೋಹಿತ್ರನ್ನು ನಾಯಕತ್ವದಿಂದ ಕೆಳಗಿಳಿಸಿದ ಮುಂಬೈ ಫ್ರಾಂಚೈಸಿ ಮಾಲೀಕರು, ಹೆಚ್ಚಿನ ಹಣದಾಸೆಯಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ ಕೈಕೊಟ್ಟ ಹಾರ್ದಿಕ್ಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಸ್ಥಾನ ನೀಡಿದರು. ಫ್ರಾಂಚೈಸಿಯ ಈ ನಡೆಗೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸದ್ಯ ಇದೇ ಕಾರಣದಿಂದ ರೋಹಿತ್ 2025ರ ಐಪಿಎಲ್ ಆವೃತ್ತಿಯಲ್ಲಿ ಎಂಐ ಪರ ಆಡುವುದಿಲ್ಲ ಎಂಬ ಸುದ್ದಿಗಳು ಸದ್ಯ ವ್ಯಾಪಕವಾಗಿ ಸದ್ದು ಮಾಡುತ್ತಿವೆ.
ಐಪಿಎಲ್ 2025ರ ಹರಾಜು ಪ್ರಕ್ರಿಯೆಯಲ್ಲಿ ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ತೊರೆಯಲು ವೈಯಕ್ತಿಕವಾಗಿ ನಿರ್ಧರಿಸಿದ್ದಾರೆ ಎನ್ನಲಾಗಿದ್ದೇ ಆದರೂ ಫ್ರಾಂಚೈಸಿ ಕೂಡ ಅವರನ್ನು ಉಳಿಸಿಕೊಳ್ಳಲು ಹೆಚ್ಚು ಚಿಂತನೆ ನಡೆಸಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕ್ಯಾಪ್ಟನ್ ರೋಹಿತ್ ಶರ್ಮರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡಲಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದರೆ, ಮತ್ತೊಂದೆಡೆ ರೋಹಿತ್ ಲಖನೌ ಸೂಪರ್ ಜೈಂಟ್ಸ್ ಪಾಲಾಗಲಿದ್ದಾರೆ ಎನ್ನಲಾಗಿದೆ. 'ಹಿಟ್ಮ್ಯಾನ್' ಕ್ಯಾಪ್ಟನ್ಸಿ ಮತ್ತು ಬ್ಯಾಟಿಂಗ್ ವೈಖರಿ ತಂಡಕ್ಕೆ ದೊಡ್ಡ ಬಲ ನೀಡಲಿದೆ ಎಂದು ಲೆಕ್ಕಾಚಾರ ಹಾಕಿಕೊಂಡಿರುವ ಎಲ್ಎಸ್ಜಿ, ರೋಹಿತ್ರನ್ನು ಯಾವುದೇ ಕಾರಣಕ್ಕೂ ಆಕ್ಷನ್ನಲ್ಲಿ ಬಿಟ್ಟುಕೊಡಬಾರದು ಎಂದು ನಿರ್ಧರಿಸುವುದಾಗಿ ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).