

ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದಲೂ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಬಿಗ್ ಬಾಸ್ ಸೀಸನ್ 11ರ (BBKS11) ಗ್ರ್ಯಾಂಡ್ ಓಪನಿಂಗ್ಗೆ ವೀಕ್ಷಕರು ತೀವ್ರ ಕುತೂಹಲ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ 11ರ ಪ್ರಾರಂಭದ ಬಗ್ಗೆ ಒಂದಷ್ಟು ವಿಷಯಗಳು ಹೊರಬೀಳುತ್ತಿದ್ದಂತೆ ಇವರು ಬಿಗ್ ಮನೆ ಪ್ರವೇಶಿಸುತ್ತಾರಾ? ವೈರಲ್ ಆದ ಈ ವ್ಯಕ್ತಿಗಳು ಎಂಟ್ರಿ ಕೊಡಬಹುದಾ? ಎಂಬ ಹತ್ತು ಹಲವು ಕುತೂಹಲಕಾರಿ ಪ್ರಶ್ನೆಗಳು ಜಾಲತಾಣವನ್ನು ಸುತ್ತುವರೆದಿತ್ತು. ಒಂದೆಡೆ ಸ್ಪರ್ಧಿಗಳು (Contestants) ಯಾರಿರಬಹುದು ಎಂಬ ಲೆಕ್ಕಾಚಾರಗಳ ಮಧ್ಯೆ ಸುದೀಪ್ ಈ ಬಾರಿಯ ಸೀಸನ್ ನಡೆಸಿಕೊಡುವುದಿಲ್ಲ ಅನ್ನೋ ವಿಚಾರ ವೀಕ್ಷಕರಲ್ಲಿ ಭಾರೀ ಬೇಸರ ಮೂಡಿಸಿತ್ತು. ಆದ್ರೆ, ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ಕಿಚ್ಚ ಸುದೀಪ್ ಅವರೇ ವಹಿಸಿಕೊಂಡಿದ್ದು ನೋಡುಗರಲ್ಲಿ ಸಂತಸ ತಂದಿದೆ.
ನಿನ್ನೆ ನಡೆದ ಅದ್ಧೂರಿ ಬಿಗ್ ಬಾಸ್ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಸುದೀಪ್, 17 ಘಟಾನುಘಟಿ ಸ್ಪರ್ಧಿಗಳನ್ನು ಬಿಗ್ ಮನೆಗೆ ಸ್ವಾಗತಿಸಿದರು. ಸೀಸನ್ 11ರ (BBKS11) ಮನೆಯೊಳಗೆ ಅದ್ಧೂರಿಯಾಗಿ ಎಂಟ್ರಿಕೊಡುವ ಬಹುನಿರೀಕ್ಷಿತ ಸ್ಪರ್ಧಿಗಳು ಇವರೇ ಇರಬಹುದಾ? ಎಂದು ತೀವ್ರ ಕಾತರ, ಕುತೂಹಲ ವ್ಯಕ್ತಪಡಿಸುತ್ತಿದ್ದ ವೀಕ್ಷಕರಿಗೆ ಸಿಕ್ಕಿದ್ದು ತಾವು ಬಯಸಿದ್ದೇ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ 11 ಆರಂಭಕ್ಕೂ ಒಂದು ತಿಂಗಳ ಹಿಂದೆಯೇ ಮನೆಯೊಳಗೆ ಹೋಗುವ 17 ಕಂಟೆಸ್ಟೆಂಟ್ಗಳ ಸಂಭಾವ್ಯ ಪಟ್ಟಿ ಇಲ್ಲಿದೆ ನೋಡಿ ಎಂಬ ಸುದ್ದಿಗಳು ಹರಿದಾಡಲು ಪ್ರಾರಂಭಿಸಿತ್ತು. ಇಂದು ಬಿಗ್ ಮನೆಯಲ್ಲಿರುವ ಬಹುತೇಕ ಮಂದಿ ಅಂದು ಈ ಪಟ್ಟಿಯಲ್ಲಿರುವವರೇ ಎಂಬುದೇ ಸದ್ಯ ಅಚ್ಚರಿ ಸಂಗತಿ.
ಸಾಮಾನ್ಯವಾಗಿ ಈ ಹಿಂದಿನಿಂದಲೂ ಯಾರು ಮನೆಗೆ ಹೋಗಬಹುದು ಎಂಬ ಲೆಕ್ಕಾಚಾರಗಳು, ಸುದ್ದಿಗಳು ಬಿಗ್ಬಾಸ್ ಕಾರ್ಯಕ್ರಮ ಶುರುವಾಗುವ ಒಂದೆರೆಡು ತಿಂಗಳ ಹಿಂದಿನಿಂದಲೇ ಜಾಲತಾಣಗಳಲ್ಲಿ ಚರ್ಚೆಯಾಗುತ್ತವೆ. ಅಲ್ಲಿ ಹರಿದಾಡುವ ಫೋಟೋಗಳು, ಹೆಸರುಗಳು ಕೆಲವರ ಹುಬ್ಬೇರಿಸಿದರೆ, ಇನ್ನು ಕೆಲವರು ಇವರೆಲ್ಲ ಬಿಗ್ ಮನೆಗೆ ಅರ್ಹ ಅಭ್ಯರ್ಥಿಗಳಲ್ಲ ಎಂದು ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದ್ರೆ, ಅಂದು ಆ ಸೀಸನ್ನ ಗ್ರ್ಯಾಂಡ್ ಓಪನಿಂಗ್ನಲ್ಲಿ ಸಂಭಾವ್ಯ ಪಟ್ಟಿಯಲ್ಲಿದ್ದವರ ಪೈಕಿ ಬೆರಳೆಣಿಕೆಯಷ್ಟು ಜನರು ಮಾತ್ರ ಎಂಟ್ರಿ ಕೊಡುತ್ತಿದ್ದರು. ಇದು ಅನೇಕರಿಗೆ ಭಾರೀ ನಿರಾಸೆ ತರುತ್ತಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಊಹಿಸಿದ ಅಷ್ಟು ಸ್ಪರ್ಧಿಗಳ ಪೈಕಿ ಬಹುತೇಕರು ಸೀಸನ್ 11ರ ಮನೆ ಪ್ರವೇಶಿಸಿದ್ದಾರೆ.
ಜಾಲತಾಣಗಳಲ್ಲಿ ಬಿಗ್ ಬಾಸ್ ಸೀಸನ್ 11ರ ಪ್ರಾರಂಭಕ್ಕೂ ಮುನ್ನ ಹರಿದಾಡಿದ್ದ ಸ್ಪರ್ಧಿಗಳ ಪೈಕಿ ಭವ್ಯ ಗೌಡ, ಧನರಾಜ್ ಆಚಾರ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ, ಶಿಶಿರ್, ಮಾನಸಾ, ಅನುಷಾ ರೈ, ಮೋಕ್ಷಿತಾ ಪೈ, ಗೌತಮಿ ಜಾಧವ್, ತ್ರಿವಿಕ್ರಮ್, ಐಶ್ವರ್ಯ ಶಿಂಧೋಗಿ, ಧರ್ಮ ಕೀರ್ತಿರಾಜ್ ಇದೀಗ ಬಿಗ್ ಮನೆಯೊಳಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಹೆಸರುಗಳು ಬಿಗ್ಬಾಸ್ ಮನೆಗೆ ಹೋಗುವ ಸ್ಪರ್ಧಿಗಳ ಸಂಭಾವ್ಯ ಪಟ್ಟಿಯಲ್ಲಿ ಉಲ್ಲೇಖವಾಗಿತ್ತು ಎಂಬುದು ಗಮನಾರ್ಹ.