

Champions Trophy: ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ನಿನ್ನೆಯಿಂದ (ಫೆ.19) ಅಧಿಕೃತ ಚಾಲನೆ ಪಡೆದುಕೊಂಡಿದ್ದು, ಶುಭಾರಂಭ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ಇನ್ನು ಟೂರ್ನಿಯ ಎರಡನೇ ದಿನದಂದು ಬಾಂಗ್ಲಾದೇಶ ಮತ್ತು ಭಾರತ ತಂಡಗಳು ಅಖಾಡಕ್ಕಿಳಿದಿದ್ದು, ಮೊದಲು ಬ್ಯಾಟ್ ಮಾಡುತ್ತಿರುವ ಬಾಂಗ್ಲಾ ಪಡೆಗೆ ದೊಡ್ಡ ಆಘಾತವೇ ಎದುರಾಗಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ, ಟೀಮ್ ಇಂಡಿಯಾಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. ಈ ವೇಳೆ ಕ್ರೀಸ್ಗೆ ಬಂದ ಬಾಂಗ್ಲಾ ಪಡೆ, ಆರಂಭದಲ್ಲೇ ಭಾರತೀಯ ಬೌಲರ್ಗಳ ಆರ್ಭಟಕ್ಕೆ ತತ್ತರಿಸಿದ್ದು, 25 ಓವರ್ ಅಂತ್ಯಕ್ಕೆ ಬರೋಬ್ಬರಿ ಐದು ವಿಕೆಟ್ಗಳನ್ನು ಕಳೆದುಕೊಂಡು, ತೀವ್ರ ಪರದಾಡುತ್ತಿದೆ. ಬಾಂಗ್ಲಾ ಹುಲಿಗಳನ್ನು ಕಾಡುತ್ತಿರುವ ಟೀಮ್ ಇಂಡಿಯಾ ಬೌಲರ್ಗಳ ಪೈಕಿ ಹ್ಯಾಟ್ರಿಕ್ನತ್ತ ಸಾಗಿದ ಸ್ಪಿನ್ನರ್ ಅಕ್ಸರ್ ಪಟೇಲ್ ಪ್ರಯತ್ನ ಕಡೆಗೂ ವಿಫಲವಾಯಿತು. ಅದು ಕ್ಯಾಪ್ಟನ್ ಎಡವಟ್ಟಿನಿಂದ.
ಜಖೆರ್ ಅಲಿ ವಿಕೆಟ್ ಪಡೆದು ಅಂತಾರಾಷ್ಟ್ರೀಯ ಏಕದಿನ ಇನ್ನಿಂಗ್ಸ್ನಲ್ಲಿ ಹ್ಯಾಟ್ರಿಕ್ ವಿಕೆಟ್ ದಾಖಲೆ ಬರೆಯಬೇಕಿದ್ದ ಅಕ್ಸರ್ ಪಟೇಲ್ ಕನಸನ್ನು ರೋಹಿತ್ ಶರ್ಮ ಕ್ಯಾಚ್ ಕೈಚೆಲ್ಲುವ ಮೂಲಕ ಭಗ್ನಗೊಳಿಸಿದರು. ಸುಲಭ ಕ್ಯಾಚ್ ಅನ್ನು ಕೈಬಿಟ್ಟ ರೋಹಿತ್, ತಾನು ಬಾಲ್ ಹಿಡಿಯಲು ಸಾಧ್ಯವಾಗಲಿಲ್ಲ ಎಂಬ ಬೇಸರದಿಂದ ನೆಲಕ್ಕೆ ಎರಡ್ಮೂರು ಬಾರಿ ಕೈನಿಂದ ಬಡಿದುಕೊಂಡರು. ಕಡೆಗೆ ಅಭಿಮಾನಿಗಳ ಮುಂದೆ ಕ್ಷಮೆಯಾಚಿಸಿದರು. ಕ್ಯಾಪ್ಟನ್ ಕ್ಯಾಚ್ ಡ್ರಾಪ್ನಿಂದ ಅಕ್ಸರ್ ಪಟೇಲ್ ಹ್ಯಾಟ್ರಿಕ್ ದಾಖಲೆ ಮೊಟಕುಗೊಂಡಿತು ಎಂಬ ನಿರಾಸೆ ಅನೇಕರದ್ದು. ರೋಹಿತ್ ಕ್ಯಾಚ್ ಕೈಬಿಟ್ಟ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದ್ದು, ಸದ್ಯ ಹಲವರ ಟೀಕೆಗೆ ಗುರಿಯಾಗಿದೆ,(ಏಜೆನ್ಸೀಸ್).