

ನವದೆಹಲಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಪತ್ನಿ ರಿತಿಕಾ ಸಾಜ್ದೇಹ್ ಅವರು ತೀವ್ರ ಟ್ರೋಲ್ ಮತ್ತು ಟೀಕೆಗಳಿಗೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿತಿಕಾ ಮಾಡಿದ ಪೋಸ್ಟ್ ಭಾರಿ ವಿವಾದಕ್ಕೆ ಕಾರಣವಾಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆದರಿದ ರಿತಿಕಾ, ತಮ್ಮ ಪೋಸ್ಟ್ ಅನ್ನು ತಕ್ಷಣವೇ ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ರೋಹಿತ್ ಪತ್ನಿ ಮಾಡಿದ ಪೋಸ್ಟ್ ಏನು? ಇಷ್ಟು ದೊಡ್ಡ ವಿವಾದಕ್ಕೆ ಕಾರಣಗಳೇನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಪ್ಯಾಲೆಸ್ತೀನ್ನ ರಫಾ ನಗರ ಮೇಲೆ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 45ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಸೆಲೆಬ್ರಿಟಿಗಳು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ಯಾಲೆಸ್ತೀನ್ ನಾಗರಿಕರ ಬೆಂಬಲಕ್ಕೆ ನಿಂತಿದ್ದು, ಆಲ್ ಐಸ್ ಆನ್ ರಫಾ ಎಂಬ ಅಭಿಯಾನ ಶುರು ಮಾಡಿದ್ದಾರೆ. ಈ ಅಭಿಯಾನಕ್ಕೆ ಸಂಬಂಧಿಸಿದ ಪೋಸ್ಟ್ ಅನ್ನು ರೋಹಿತ್ ಪತ್ನಿ ರಿತಿಕಾ ಸಹ ಶೇರ್ ಮಾಡಿಕೊಂಡಿದ್ದರು. ಇದೇ ಪೋಸ್ಟ್ ರಿತಿಕಾರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ರಿತಿಕಾ ಶೇರ್ ಮಾಡಿರುವ ಪೋಸ್ಟ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ದೇಶದಲ್ಲಿ ನಡೆಯುತ್ತಿರುವ ನರಮೇಧದ ಬಗ್ಗೆ ಪೋಸ್ಟ್ ಮಾಡಿದ್ದೀರಿ. ಆದರೆ, ಕಾಶ್ಮೀರಿ ಪಂಡಿತರು, ಮಣಿಪುರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ನೀವು ಎಂದಾದರೂ ಮಾತನಾಡಿದ್ದೀರಾ? ನಮ್ಮ ದೇಶದಲ್ಲೇ ಹಲವು ಸಮಸ್ಯೆಗಳಿವೆ ಅವುಗಳಿಗೆ ಎಂದಾದರೂ ಸ್ಪಂದಿಸಿದ್ದೀರಾ? ಇಷ್ಟು ದಿನ ಟ್ರೆಂಡ್ ಅನುಸರಿಸಿ ಇಂತಹ ಪೋಸ್ಟ್ ಗಳನ್ನು ಹಾಕುವುದು ಸರಿಯಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ ರಿತಿಕಾ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ರಫಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಸೇನೆ ನಡೆಸಿದ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ 45 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆ ವಿಶ್ವವನ್ನೇ ಬೆಚ್ಚಿಬೀಳಿಸಿದೆ. (ಏಜೆನ್ಸೀಸ್)