ನವದೆಹಲಿ: ಕಳೆದ ಕೆಲವು ದಿನಗಳಿಂದ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಮಾಡೆಲ್ ಕಂ ನಟಿ ನತಾಶಾ ಸ್ಟಾಂಕೋವಿಕ್ ಮದುವೆ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸ್ಟಾರ್ ದಂಪತಿ ಸಂಬಂಧದಲ್ಲಿ ಬಿರುಕು ಮೂಡಿದ್ದು ಇಬ್ಬರು ಬೇರೆಯಾಗಲಿದೆ ಎಂದು ಹೇಳಲಾಗುತ್ತಿದೆ. ನತಾಶಾ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಿಂದ ಪಾಂಡ್ಯ ಹೆಸರನ್ನು ತೆಗೆದುಹಾಕಿದ ಬಳಿಕ ಡಿವೋರ್ಸ್ ವದಂತಿ ಇನ್ನಷ್ಟು ಗಟ್ಟಿಯಾಗಿದೆ. ಹಾರ್ದಿಕ್ ಅವರ ಕೆಲವು ಫೋಟೋಗಳನ್ನು ಸಹ ನತಾಶಾ ಡಿಲೀಟ್ ಮಾಡಿದ್ದು, ತಮ್ಮ ಪುತ್ರ ಅಗಸ್ತ್ಯ ಇರುವ ಫೋಟೋಗಳನ್ನು ಮಾತ್ರ ಉಳಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಹಾರ್ದಿಕ್-ನತಾಶಾ ಡಿವೋರ್ಸ್ ವದಂತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಬಿರುಗಾಳಿ ಎಬ್ಬಿಸಿದ್ದು, ಕೆಲ ಪಿತೂರಿ ಸಿದ್ಧಾಂತಗಳು ಸಹ ಹುಟ್ಟಿಕೊಂಡಿವೆ. ಕೆಲವರು ನತಾಶಾ ಅವರನ್ನು ಟ್ರೋಲ್ ಮಾಡಿ, ಆಕೆ ಅವಕಾಶವಾದಿ ಮತ್ತು ಹಣಕ್ಕಾಗಿ ಈ ರೀತಿ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇನ್ನು ಕೆಲವರು ಹಾರ್ದಿಕ್ ಮೇಲೆ ಸಹಾನುಭೂತಿ ಮೂಡಿಸಲು ಅವರ PR ತಂಡದ ಅಭಿಯಾನ ಇದು ಎಂದಿದ್ದಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಮತ್ತು ಆಟಗಾರನಾಗಿ ಹಾರ್ದಿಕ್ ದಯನೀಯವಾಗಿ ವಿಫಲಗೊಂಡಿದ್ದು, ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಹಾರ್ದಿಕ್ ಮೇಲೆ ಅನುಕಂಪ ಮೂಡಿಸಲು ಡಿವೋರ್ಸ್ ವದಂತಿ ತೇಲಿ ಬಿಡಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ.
ಆದರೆ, ಇಷ್ಟೆಲ್ಲ ಚರ್ಚೆಗಳಾಗುತ್ತಿದ್ದರು ಹಾರ್ದಿಕ್ ಆಗಲಿ ಅಥವಾ ನತಾಶಾ ಆಗಲಿ ಒಂದೇ ಒಂದು ಮಾತನ್ನು ಕೂಡ ಆಡಿಲ್ಲ. ಆದಾಗ್ಯೂ ಮೂಲಗಳ ಪ್ರಕಾರ ಕಳೆದ 6 ತಿಂಗಳಿಂದ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆಯಂತೆ. ಇಬ್ಬರು ಡಿವೋರ್ಸ್ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ, ಜೀವನಾಂಶ ವಿಚಾರದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಕೇವಲ ಊಹಾತ್ಮಕ ಮತ್ತು ಉತ್ಪ್ರೇಕ್ಷಿತವಾಗಿವೆ. ಅಲ್ಲದೆ, ಇದು ಪಿಆರ್ ಅಭಿಯಾನ ಎಂಬ ಸುದ್ದಿಯು ಸುಳ್ಳು. ನತಾಶಾ ಅವರು ಸೆರ್ಬಿಯಾ ದೇಶದಕ್ಕೆ ಸೇರಿರುವುದರಿಂದ ಆ ದೇಶದ ನಿಯಮದ ಪ್ರಕಾರ ಹಾರ್ದಿಕ್ ಪಾಂಡ್ಯ ಶೇ.70ರಷ್ಟು ಆಸ್ತಿಯನ್ನು ಪತ್ನಿಗೆ ನೀಡಬೇಕಿದೆ ಎಂಬ ಚರ್ಚೆಯು ನಡೆಯುತ್ತಿದೆ. ಆದರೆ, ಇದು ಸುಳ್ಳೆಂದು ತಿಳಿದುಬಂದಿದೆ.
ಯಾವುದೇ ಮಾಧ್ಯಮಗಳು ಹಾರ್ದಿಕ್ ಮತ್ತು ನತಾಶಾರನ್ನು ಸಂಪರ್ಕಿಸಿದರೂ ಈ ವಿಚಾರವಾಗಿ ಮಾತನಾಡಲು ಇಬ್ಬರು ಸಿದ್ಧರಿಲ್ಲ ಎಂದು ತಿಳಿದುಬಂದಿದೆ. ಇಬ್ಬರು ಮಾಧ್ಯಮಗಳ ಮುಂದೆ ಮಾತನಾಡುವವರೆಗೂ ಅಥವಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸುವವರೆಗೂ ಇದು ವದಂತಿಯಾಗಿಯೇ ಉಳಿಯಲಿದೆ. ಅಲ್ಲದೆ, ನಾನಾ ಊಹಾಪೋಹಗಳು ಸಹ ಹರಿದಾಡಲಿದೆ.
ಅಂದಹಾಗೆ ಹಾರ್ದಿಕ್ ಮತ್ತು ನತಾಶಾ ಮೊದಲ ಬಾರಿಗೆ 2018 ರಲ್ಲಿ ಭೇಟಿಯಾದರು, 2020ರ ಜನವರಿ 1ರಂದು ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ನಂತರ ಲಾಕ್‌ಡೌನ್ ಸಮಯದಲ್ಲಿ ತಮ್ಮ ಮನೆಯಲ್ಲಿ ಸರಳವಾಗಿ ವಿವಾಹವಾದರು. ಅದೇ ವರ್ಷದ ಜುಲೈನಲ್ಲಿ, ತಮ್ಮ ಮಗ ಅಗಸ್ತ್ಯನನ್ನು ಸ್ವಾಗತಿಸಿದರು. 2023ರ ಫೆಬ್ರವರಿ ತಿಂಗಳಲ್ಲಿ ಇಬ್ಬರು ಅದ್ಧೂರಿಯಾಗಿ ಮದುವೆಯಾದರು. ರಾಜಸ್ಥಾನದ ಉದಯಪುರದಲ್ಲಿ ವಿವಾಹ ಸಮಾರಂಭ ಜರುಗಿತು.
ಯಾರು ಈ ನತಾಶಾ?
ಮಾರ್ಚ್ 4, 1992ರಂದು ಜನಿಸಿದ ನತಾಶಾ, ಸೆರ್ಬಿಯಾ ಮೂಲದ ಓರ್ವ ಮಾಡೆಲ್. 2012ಕ್ಕೆ ಭಾರತಕ್ಕೆ ಕಾಲಿಟ್ಟ ಈ ಬ್ಯೂಟಿ ಇಂಡಿಯನ್ ರ್ಯಾಪರ್ ಬಾದ್ಷಾ ಅವರ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಹೆಜ್ಜೆ ಹಾಕುವ ಮೂಲಕ ಪ್ರಖ್ಯಾತಿ ಗಳಿಸಿದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನತಾಶಾ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ನತಾಶಾ ಅವರು ಮೊದಲಿಗೆ ಪ್ರಕಾಶ್ ಝಾ ಅವರ ಸತ್ಯಾಗ್ರಹ ಸಿನಿಮಾದಲ್ಲಿ ‘ಅಯೋ ಜಿ’ ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡರು. ಇದಾದ ಬೆನ್ನಲ್ಲೇ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡರು. ಬಳಿಕ ಫರ್ಕಿ ರಿಟರ್ನ್ಸ್(ಮೆಹಬೂಬ), ಡ್ಯಾಡಿ(ಜಿಂದಗಿ ಮೆರಿ ಡ್ಯಾನ್ಸ್ ಡ್ಯಾನ್ಸ್) ಮತ್ತು ಫ್ರೈ ಡೇ (ಜಿಮೈ ಛೋಯಿ) ಚಿತ್ರಗಳ ಹಾಡಿನಲ್ಲಿ ನತಾಶಾ ಕಾಣಿಸಿಕೊಂಡರು. ಇತ್ತೀಚೆಗೆ ಇಮ್ರಾನ್ ಹಶ್ಮಿ ಅವರ ದಿ ಬಾಡಿ ಚಿತ್ರದ ಜಲಕ್ ದಿಕಲಾಜಾ ಹೊಸ ಅವತರಣಿಕೆಯ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2019ರ ನಾಚ್ ಬೆಲಿಯೇ-9 ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಇದರಲ್ಲಿ ಮೂರನೇ ರನ್ನರ್ ಅಪ್ ಆಗಿದ್ದರು.
ಕನ್ನಡದಲ್ಲಿಯೂ ನಶೆ ಏರಿಸಿದ ನತಾಶಾ
ನಟ ದುನಿಯಾ ವಿಜಯ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ದನ ಕಾಯೋನು ಚಿತ್ರದಲ್ಲಿಯು ನತಾಶಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)
ಹಾರ್ದಿಕ್ ಪಾಂಡ್ಯ-ನತಾಶಾ ಡಿವೋರ್ಸ್ ವದಂತಿಗೆ ಬಿಗ್ ಟ್ವಿಸ್ಟ್! ಇದೆಲ್ಲವೂ ಹಾರ್ದಿಕ್ರದ್ದೇ ಕೈವಾಡ?