ಪತ್ನಿಯ ಜೀವಕ್ಕೆ ಅಪಾಯ ತಂದಿಟ್ಟ ಅಂಬಟಿ ರಾಯುಡು ವರ್ತನೆ! ಇನ್ನಾದ್ರೂ ಸುಮ್ಮನಿರಲು ಸಲಹೆ

Ambati Rayudu
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಅಂಬಟಿ ರಾಯುಡು ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್​ 17ನೇ ಸೀಸನ್​ನ ಮುಕ್ತಾಯವಾದರೂ ಟೀಮ್​ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡವನ್ನು ರಾಯುಡು ಟೀಕಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಐಪಿಎಲ್​ನಲ್ಲಿ ಆರ್​ಸಿಬಿ ಮತ್ತು ಚೆನ್ನೈ ನಡುವೆ ಕೊನೆಯ ಲೀಗ್​ ಪಂದ್ಯ ನಡೆದಿತ್ತು. ಇದು ಉಭಯ ತಂಡಗಳಿಗೆ ಪ್ಲೇಆಫ್​ ಪ್ರವೇಶ ಖಚಿತ ಪಡಿಸುವ ನಿರ್ಣಾಯಕ ಪಂದ್ಯವಾಗಿತ್ತು. ಆದರೆ, ಈ ಪಂದ್ಯದಲ್ಲಿ ಆರ್​ಸಿಬಿ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್​ ಪ್ರವೇಶ ಪಡೆಯಿತು. ಇಲ್ಲಿಂದಾಚೆಗೆ ಕೊಹ್ಲಿ ಮತ್ತು ಆರ್​ಸಿಬಿ ಅನ್ನು ಕೆಣಕಲು ರಾಯುಡು ಶುರು ಮಾಡಿದರು. ಪ್ಲೇಆಫ್​ನಲ್ಲಿ ರಾಜಸ್ಥಾನ ವಿರುದ್ಧ ಆರ್​ಸಿಬಿ ಸೋತು ಐಪಿಎಲ್​ನಿಂದ ಹೊರಗುಳಿದಾಗ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪೋಸ್ಟ್​ ಮಾಡಿ ಕೊಹ್ಲಿಯನ್ನು ಮತ್ತು ಆರ್​ಸಿಬಿಯನ್ನು ರಾಯುಡು ಅಣಕಿಸಿದರು. ಇಷ್ಟೇ ಅಲ್ಲದೆ, ಆರೆಂಜ್​ ಕ್ಯಾಪ್​ ಗೆದ್ದ ಮಾತ್ರಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ ಎಂದು ನೇರವಾಗಿ ಕೊಹ್ಲಿ ಟಾರ್ಗೆಟ್ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕೊಹ್ಲಿಯನ್ನು ಟೀಕಿಸಿರುವ ರಾಯುಡು ವಿರುದ್ಧ ಆರ್​ಸಿಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಪತ್ನಿ, ಮಗುವಿಗೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ರಾಯುಡು ಕೊಹ್ಲಿಯನ್ನು ಟಾರ್ಗೆಟ್​ ಮಾಡಿರುವುದನ್ನು ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಅವಮಾನಿಸುತ್ತಿದ್ದಾರೆ ಎಂದು ರಾಯುಡು ಕುಟುಂಬವನ್ನು ಟಾರ್ಗೆಟ್ ಮಾಡಿದಂತಿದೆ. ತಮ್ಮ ಕುಟುಂಬಕ್ಕೆ ಬೆದರಿಕೆಗಳು ಬರುತ್ತಿವೆ ಎಂದು ರಾಯುಡು ತಮ್ಮ ಗೆಳೆಯನಿಗೆ ಹೇಳಿದ್ದು, ಈ ವಿಚಾರಗಳನ್ನು ಅವರು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾರೆ. ಹೀಗಾಗಿ ಈ ಸಂಗತಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರಾಯುಡು ಅವರ ಸ್ನೇಹಿತ ಸ್ಯಾಮ್ ಪೌಲ್ ಮಾತನಾಡಿ, ಕೆಲ ಆರ್‌ಸಿಬಿ ಅಭಿಮಾನಿಗಳು ರಾಯುಡು ಮೇಲೆ ಕೋಪಗೊಂಡಿದ್ದಾರೆ. ಹೀಗಾಗಿ ರಾಯುಡು ಕುಟುಂಬದ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಕೆಟ್ಟ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ರಾಯುಡು ಅವರ ಪತ್ನಿ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಬೆದರಿಕೆಯನ್ನು ಹಾಕಲಾಗಿದೆ. ಪೊಲೀಸರು ಮತ್ತು ನ್ಯಾಯಾಂಗವು ಇಂಥವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕ್ರಿಕೆಟ್​ನಲ್ಲಿ ಟೀಕೆ ಸಾಮಾನ್ಯ. ಆದರೆ, ಈ ರೀತಿ ಒಂದು ಕುಟುಂಬವನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಕೆಲವರು ರಾಯುಡು ಬೆಂಬಲಕ್ಕೆ ನಿಂತಿದ್ದಾರೆ. ಆದರೂ, ರಾಯುಡು ವರ್ತನೆ ಅತಿಯಾಯ್ತು, ಟೀಕೆ ಮಾಡುವುದು ತಪ್ಪಲ್ಲ ಆದರೆ, ಒಬ್ಬ ವ್ಯಕ್ತಿಯನ್ನೇ ಟಾರ್ಗೆಟ್​ ಮಾಡಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ರಾಯುಡು ಅವರ ಈ ವರ್ತನೆಯಿಂದಲೇ ತಮ್ಮ ಕುಟುಂಬಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ ಎಂದು ಇನ್ನು ಕೆಲವರು ರಾಯುಡು ವರ್ತನೆಯನ್ನು ಖಂಡಿಸಿದ್ದಾರೆ ಮತ್ತು ಇನ್ನಾದರೂ ಸುಮ್ಮನಿರುವಂತೆ ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net