

ನವದೆಹಲಿ: ಐಪಿಎಲ್ನ 17ನೇ ಆವೃತ್ತಿಯ ಪ್ರತಿ ಪಂದ್ಯವು ಸದ್ಯ ರೋಚಕವಾಗಿ ಮೂಡಿಬರುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಮಾತ್ರ ಸಖತ್ ಥ್ರಿಲ್ ಆಗುತ್ತಿದ್ದಾರೆ. ಅದರಲ್ಲೂ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ 7ನೇ ಸ್ಥಾನಕ್ಕೆ ಜಿಗಿದಿದ್ದು, ಭಾರೀ ಅಂತರದಿಂದ ಹಾಗೂ ಸತತ ಗೆಲುವುಗಳಿಂದ ಎದುರಾಳಿಗಳನ್ನು ಮಣಿಸಿ, ಪ್ಲೇಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಸದ್ಯ ಉಳಿದಿರುವ ಇನ್ನೆರೆಡು ಪಂದ್ಯಗಳಲ್ಲಿ ಗೆಲುವು ಸಾಧಿಸುವುದಷ್ಟೇ ಆರ್ಸಿಬಿಯ ದೊಡ್ಡ ಗುರಿ. ಆದರೆ, ಇದು ಬೆಂಗಳೂರು ಪಡೆಗೆ ಈಗ ಮತ್ತಷ್ಟು ಸುಲಭ ಆದಂತಾಗಿದೆ. ಹೇಗೆ ಅಂತೀರಾ ಈ ವರದಿ ನೋಡಿ.
ಮೇ.07ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಂದಗತಿಯ ರನ್ರೇಟ್ ಮಾಡುವ ಮೂಲಕ ಐಪಿಎಲ್ನ ನೀತಿ ಸಂಹಿತೆ ಉಲ್ಲಂಘಿಸಿತು. ಸದ್ಯ ಈ ನಿಯಮ ಬ್ರೇಕ್ ಮಾಡಿದ ಕಾರಣಕ್ಕೆ ಡೆಲ್ಲಿ ಕ್ಯಾಪ್ಟನ್ ರಿಷಭ್ ಪಂತ್ಗೆ ಮುಂಬರುವ ಒಂದು ಮ್ಯಾಚ್ನಿಂದ ನಿಷೇಧಿಸಲಾಗಿದ್ದು, 30 ಲಕ್ಷ ರೂ. ದಂಡ ವಿಧಿಸಲಾಗಿದೆ. ಸದ್ಯ ಇದರಿಂದ ಕಂಗಾಲಾಗಿರುವ ಡೆಲ್ಲಿ ಪಡೆಗೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿರುವ ಪಂತ್, ಈಗ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಜತೆಗಿಲ್ಲ ಎಂಬ ಭೀತಿ ಶುರುವಾಗಿದೆ. ಇದು ಡಿಸಿಗೆ ಶಾಪವಾದರೆ, ಆರ್ಸಿಬಿಗೆ ವರವಾಗಿದೆ.
ಕೇವಲ ಕ್ಯಾಪ್ಟನ್ಗೆ ಮಾತ್ರ ದಂಡ ವಿಧಿಸಲಾಗಿಲ್ಲ, ಬದಲಿಗೆ ತಂಡದ ಪ್ರತಿ ಆಟಗಾರರಿಗೆ ತಲಾ 12 ಲಕ್ಷ ರೂ. ಅಂದರೆ ಅವರ ಪಂದ್ಯದ ಅರ್ಧದಷ್ಟು ಶುಲ್ಕವನ್ನು ದಂಡವಾಗಿ ಕಟ್ಟುವಂತೆ ತಿಳಿಸಲಾಗಿದೆ. ಐಪಿಎಲ್ನ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವ ಎಷ್ಟೋ ತಂಡಗಳು ಲೀಗ್ನಲ್ಲಿ ಇದೇ ತಪ್ಪನ್ನು ರಿಪೀಟ್ ಮಾಡಿವೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ಇದನ್ನು ಮೂರನೇ ಬಾರಿಗೆ ಮಾಡಿದ ಕಾರಣ, ಈ ಬಾರಿ ಟೀಮ್ನ ನಾಯಕ ರಿಷಭ್ ಪಂತ್ ಭಾರೀ ಮೊತ್ತದ ದಂಡ ಕಟ್ಟುವಂತೆ ಹಾಗೂ ಒಂದು ಪಂದ್ಯದಿಂದ ಹೊರಗುಳಿಯುವಂತೆ ಕಠಿಣ ಕ್ರಮ ಜರುಗಿಸಲಾಗಿದೆ.
ಸದ್ಯ ಇದು ಒಂದು ರೀತಿ ಆರ್ಸಿಬಿಗೆ ಪ್ಲಸ್ ಪಾಯಿಂಟ್ ಆಗಿದ್ದು, ಎರಡನೇ ಅಥವಾ ಮೂರನೇ ಕ್ರಮಾಂಕದಲ್ಲಿ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮಾಡುವ ರಿಷಭ್ ಪಂತ್, ಕ್ಯಾಪ್ಟನ್ ಆಗಿಯೂ ಡೆಲ್ಲಿ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಅದರಲ್ಲೂ ಮುಂದಿನ ಪ್ರತಿ ಪಂದ್ಯವು ಬಹಳ ಮುಖ್ಯವಾಗಿದ್ದು, ಪ್ಲೇಆಫ್ಗಾಗಿ ಎದುರಾಳಿಗಳೊಂದಿಗೆ ಭಾರೀ ಹಣಾಹಣಿ ನಡೆಸಬೇಕಿದೆ, ಗೆದ್ದು ಪ್ಲೇಆಫ್ಗೆ ಎಂಟ್ರಿ ಕೊಡಲೇಬೇಕಿದೆ. ಹೀಗಿರುವಾಗಲೇ ತಂಡದಿಂದ ಪಂತ್ ಹೊರಗಿರುವುದು ಡೆಲ್ಲಿಗೆ ಮೈನಸ್ ಆದರೆ, ಆರ್ಸಿಬಿಗೆ ದೊಡ್ಡ ಪ್ಲಸ್ ಆಗಿ ಪರಿಣಮಿಸಿದೆ. ಒಟ್ಟಿನಲ್ಲಿ ಮುಂದಿನ ಮ್ಯಾಚ್ ಬೆಂಗಳೂರು ಪಾಲಾದರೆ, ಖಂಡಿತವಾಗಿ ರಿಷಭ್ ಅನುಪಸ್ಥಿತಿಯೇ ಡೆಲ್ಲಿ ಸೋಲಿಗೆ ಪ್ರಮುಖ ಕಾರಣವಾಗುವುದರಲ್ಲಿ ಅನುಮಾನವೇ ಇಲ್ಲ.