ಶೀಘ್ರವೇ ಕ್ರಿಕೆಟ್ ಚಟುವಟಿಕೆ ಪುನರಾರಂಭ

cricket chiina
Published on

ನವದೆಹಲಿ: ಕಳೆದ ಎರಡೂವರೆ ತಿಂಗಳಿಂದ ಸ್ಥಗಿತಗೊಂಡಿರುವ ಕ್ರಿಕೆಟ್ ಚಟುವಟಿಕೆಗಳನ್ನು ಪುನರಾರಂಭಿಸಲು ಕ್ರಿಕೆಟ್ ವ್ಯವಹಾರಗಳ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ) ತಯಾರಿ ಆರಂಭಿಸಿವೆ. ಆದರೆ, ಕ್ರಿಕೆಟ್ ಚಟುವಟಿಕೆಗಳು ಎಂದು ಆರಂಭವಾಗಲಿವೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ. ತರಬೇತಿ ಹಾಗೂ ಅಭ್ಯಾಸದಲ್ಲಿ ಅಗ್ರ ಕ್ರಿಕೆಟಿಗರು ಸೇರಿ ಎಲ್ಲರೂ ಭಾಗಿಯಾಗಬೇಕು ಎಂಬುದೇ ನಮ್ಮ ಅಭಿಲಾಷೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಮಹಾಮಾರಿ ಕೋವಿಡ್​19ರ ಹಾವಳಿ ಮಿತಿಮೀರಿದ್ದು, ಅಂದಾಜು 2 ಲಕ್ಷ ಜನರಿಗೆ ಸೋಂಕು ತಗುಲಿದೆ. ಆರ್ಥಿಕ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಕೂಡ ಹಂತ ಹಂತವಾಗಿ ಲಾಕ್​ಡೌನ್ ಸಡಿಲಗೊಳಿಸುತ್ತಿದ್ದು, ಮಾರ್ಗಸೂಚಿ ರೂಪಿಸಿ ಕೆಲವೊಂದು ಕ್ರೀಡಾ ಚಟುವಟಿಕೆಗಳ ಪುನರಾರಂಭಕ್ಕೆ ಈಗಾಗಲೇ ಅನುಮತಿ ನೀಡಿದೆ. ರಾಷ್ಟ್ರೀಯ ತರಬೇತಿ ಶಿಬಿರ ಆರಂಭಿಸುವ ಬಗ್ಗೆ ಕ್ರಿಕೆಟ್ ವ್ಯವಹಾರಗಳ ತಂಡ ಹಾಗೂ ಎನ್​ಸಿಎ ಸಿಬ್ಬಂದಿ ಕಾರ್ಯಸೂಚಿ ರೂಪಿಸುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಕೖಗೊಳ್ಳುವ ಸಾಧ್ಯತೆ ಇದೆ. ಕೆಲವು ರಾಜ್ಯಗಳು ಲಾಕ್​ಡೌನ್, ಆನ್​ಲಾಕ್ ಕುರಿತು ತಮ್ಮದೇ ಆದ ಮಾರ್ಗಸೂಚಿಯನ್ನು ಹೊಂದಿವೆ. ಅವುಗಳನ್ನು ಆಧರಿಸಿ ಕ್ರಿಕೆಟ್ ಚಟುವಟಿಕೆ ಪುನರಾರಂಭಿಸುವ ಬಗ್ಗೆ ತೀಮಾನಿಸಲಾಗುವುದೆಂದು ಧುಮಾಲ್ ಹೇಳಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ವಿವಿಧ ರಾಜ್ಯಗಳ ಆಟಗಾರರಿದ್ದಾರೆ. ಸ್ಥಳೀಯ ಕ್ರಿಕೆಟ್ ಸಂಸ್ಥೆ ಜತೆ ಸಮಾಲೋಚಿಸಿದ ಬಳಿಕವೇ ತರಬೇತಿ ಪುನರಾರಂಭದ ಕುರಿತು ತೀಮಾನ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ. ಇಂಗ್ಲೆಂಡ್​ನಲ್ಲಿ ಈಗಾಗಲೇ ಹಲವು ಕ್ರಿಕೆಟಿಗರು ಅಭ್ಯಾಸ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಕೂಡ ನ್ಯೂ ಸೌತ್ ವೇಲ್ಸ್ನಲ್ಲಿ ಸೋಮವಾರದಿಂದ ಅಭ್ಯಾಸ ಆರಂಭಿಸಿದ್ದಾರೆ.

ಸುರಕ್ಷಿತ ಸ್ಥಳಗಳ ಹುಡುಕಾಟ: ದೇಶೀಯ ವಿಮಾನಯಾನ ಹಾರಾಟ ಆರಂಭವಾಗಿ ಒಂದು ವಾರ ಕಳೆದಿದೆ. ಆಟಗಾರರ ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರೀಯ ತರಬೇತಿ ಶಿಬಿರ ಆರಂಭಿಸಲು ಸುರಕ್ಷಿತ ಸ್ಥಳವನ್ನು ಹುಡುಕಿಕೊಳ್ಳ ಬೇಕಾಗಿದೆ ಎಂದು ಧುಮಾಲ್ ಹೇಳಿದರು. ಈಗಷ್ಟೇ ವಿಮಾನಯಾನ ಆರಂಭವಾಗಿದೆ. ಇದಕ್ಕೆ ಜನರ ಸ್ಪಂದನೆ ಹೇಗಿದೆ ಎಂಬುದನ್ನು ಗಮನಿಸ ಲಾಗುತ್ತಿದೆ. ವಿಮಾನ ಪ್ರಯಾಣ ಶೇ.100 ಸುರಕ್ಷಿತ ಎಂಬುದು ಖಚಿತವಾದ ಮೇಲೆ ಶಿಬಿರ ಆಯೋಜಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಎಲ್ಲ ಆಟಗಾರರನ್ನು ಒಂದೆಡೆ ಸೇರಿಸುವುದು ಅಷ್ಟು ಸುಲಭದ ಮಾತಲ್ಲ. ನಾಯಕ ವಿರಾಟ್ ಕೊಹ್ಲಿ, ನಿಗದಿತ ಓವರ್​ಗಳ ತಂಡದ ಉಪನಾಯಕ ರೋಹಿತ್ ಶರ್ಮ, ಮುಂಬೈನಲ್ಲಿ ಲಾಕ್ ಆಗಿದ್ದಾರೆ. ಆಟಗಾರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಬಳಿಕವಷ್ಟೇ ತರಬೇತಿ ಆರಂಭಿಸುವ ಕ್ರಮ ಕೖಗೊಳ್ಳಬೇಕಿದೆ ಎಂದು ಧುಮಾಲ್ ತಿಳಿಸಿದ್ದಾರೆ.

ಅಭ್ಯಾಸದಲ್ಲಿ ಆಸೀಸ್ ಕ್ರಿಕೆಟಿಗರು

ಸಿಡ್ನಿ: ಆಸ್ಟ್ರೇಲಿಯಾದ ಅಗ್ರ ಕ್ರಿಕೆಟಿಗರಾದ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಹಾಗೂ ಮಿಚೆಲ್ ಸ್ಟಾರ್ಕ್ ಸೋಮವಾರದಿಂದ ಸಿಡ್ನಿ ಒಲಿಂಪಿಕ್ ಪಾರ್ಕ್​ನಲ್ಲಿ ಅಭ್ಯಾಸ ಆರಂಭಿಸಿದರು. ಖಾಲಿ ಸ್ಟೇಡಿಯಂನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಆಗಸ್ಟ್ 9ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗುವ ಕುರಿತು ಮಾಹಿತಿ ನೀಡಿತ್ತು. ಲಾಕ್​ಡೌನ್ ವೇಳೆ ಬ್ಯಾಟ್ ಮುಟ್ಟಿಲ್ಲ, ಕೇವಲ ಫಿಟ್ನೆಸ್​ಗಷ್ಟೇ ಗಮನಹರಿಸಿದ್ದೆ, ಮಾನಸಿಕವಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಸ್ಮಿತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net