

ಬೀಜಿಂಗ್: ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಘನತೆಗೆ ಧಕ್ಕೆಯನ್ನುಂಟು ಮಾಡುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದಾರೆ.
ಬಿಕ್ಕಟ್ಟು ಉಂಟಾಗಿರುವ ಲಡಾಖ್ನ ವಾಸ್ತವ ಗಡಿರೇಖೆಯ ಬಳಿ ಪರಿಸ್ಥಿತಿ ಸ್ಥಿರವಾಗಿದ್ದು ನಿಯಂತ್ರಣದಲ್ಲಿದೆ ಎಂದು ಪುನರುಚ್ಚರಿಸಿದ ಅವರು, ಬಿಕ್ಕಟ್ಟ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಯನ್ನು ಮುಂದುವರಿಸಿವೆ ಎಂದರು. ಅಲ್ಲದೆ ಶೀಘ್ರದಲ್ಲೇ ಬಿಕ್ಕಟ್ಟು ಶಮನವಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಘನತೆಯೊಂದಿಗೆ ರಾಜೀ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದರು. ಇದರ ಬೆನ್ನಲ್ಲೇ ಚೀನಾದ ಈ ಪ್ರತಿಕ್ರಿಯೆ ಬಂದಿದೆ.
ವಾಸ್ತವ ಗಡಿ ರೇಖೆ ಬಳಿಯ ಗಲ್ವಾನ್ ಕಣಿವೆಯ ಮೂರು ಕಡೆ ಮತ್ತು ಪ್ಯಾಂಗಾಂಗ್ ತ್ಸೊ ಸರೋವರದ ಬಳಿ ಚೀನಾ 6 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದೆ. ಅಲ್ಲದೆ, ಭಾರಿ ಪ್ರಮಾಣದ ಯುದ್ಧೋಪಕರಣಗಳನ್ನು ವಾಸ್ತವ ಗಡಿರೇಖೆ ಬಳಿ ಜಮಾವಣೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಹೆಚ್ಚಿನ ಸಂಖ್ಯೆಯ ಯೋಧರನ್ನು ಸ್ಥಳದಲ್ಲಿ ನಿಯೋಜಿಸಿದೆ.