

ಬೆಂಗಳೂರು: ಪ್ರಸಕ್ತ ಐಪಿಎಲ್ ಸೀಸನ್ನಲ್ಲಿ ಸತತ 6 ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ, ಜ್ವಾಲಾಮುಖಿಯಂತೆ ಸಿಡಿದೆದ್ದು ಸತತ ಆರು ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿರುವುದು ಎಲ್ಲರಿಗೂ ತಿಳಿದೇ ಇದೆ. ಒಂದು ಹಂತದಲ್ಲಿ ಆರ್ಸಿಬಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಅವಕಾಶ ಕೇವಲ ಒಂದು ಪರ್ಸೆಂಟ್ ಇತ್ತು. ಪವಾಡ ನಡೆಯದೇ ಅರ್ಹತೆ ಪಡೆಯುವುದು ಅಸಾಧ್ಯವೆನಿಸಿತು. ಆರ್‌ಸಿಬಿ ಅಭಿಮಾನಿಗಳು ಕೂಡ ತಂಡದ ಮೇಲಿನ ಭರವಸೆ ಕಳೆದುಕೊಂಡರು. ಆದರೆ ಕೆಲವೇ ವಾರಗಳಲ್ಲಿ ಇಡೀ ದೃಶ್ಯವೇ ಬದಲಾಯಿತು. ಪ್ರತಿ ಪಂದ್ಯವನ್ನು ನಾಕೌಟ್ ಎಂದು ಪರಿಗಣಿಸಿ ಆರ್‌ಸಿಬಿ ಆಟಗಾರರು ತಮ್ಮ ನೈಜ ಪ್ರತಿಭೆ ತೋರಿದರು ಮತ್ತು ಆಕ್ರಮಣಕಾರಿಯಾಗಿ ಆಡುವ ಮೂಲಕ ಯಶಸ್ಸಿನ ಹಾದಿಯನ್ನು ಹಿಡಿದರು. ಕೊನೆಯ ಆರು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಆದರೆ ಆರ್‌ಸಿಬಿಯ ನಿಜವಾದ ಕತೆ ಈಗ ಪ್ರಾರಂಭವಾಗಿದೆ.
ಇದುವರೆಗೆ ಐಪಿಎಲ್ ಕಪ್ ಗೆಲ್ಲದ ಆರ್‌ಸಿಬಿ ಈ ಬಾರಿ ಅದನ್ನು ಸಾಧಿಸುವುದು ಖಚಿತ ಎಂದು ಅಭಿಮಾನಿಗಳು ನಂಬಿದ್ದಾರೆ. ತಂಡವು ಪ್ಲೇಆಫ್ ಪ್ರವೇಶ ಮಾಡಿರುವುದರಿಂದ ಕಪ್‌ನೊಂದಿಗೆ ಮರಳುವ ನಿರೀಕ್ಷೆಯಿದೆ. ಅಲ್ಲದೆ, ಆರ್‌ಸಿಬಿ ಕೂಡ ಪ್ರಶಸ್ತಿ ಗೆದ್ದು ಸೇಡು ತೀರಿಸಿಕೊಳ್ಳುವತ್ತ ಗಮನ ಹರಿಸಿರುವಂತಿದೆ. ಆರ್‌ಸಿಬಿ ನಾಲ್ಕು ವರ್ಷಗಳಿಂದ ಮೂರು ತಂಡಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ. ಈ ಬಾರಿ ಅದನ್ನು ಸರಿದೂಗಿಸುವ ಅವಕಾಶವೂ ಸಿಕ್ಕಿದೆ. ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಈ ಬಾರಿ ಪ್ಲೇ ಆಫ್ ತಲುಪಿವೆ. ಈ ಮೂರು ತಂಡಗಳ ವಿರುದ್ಧ ಬೆಂಗಳೂರು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ 2020ರ ಐಪಿಎಲ್ ಸೀಸನ್ನಲ್ಲಿ ಆರ್‌ಸಿಬಿಯನ್ನು ಪ್ಲೇ ಆಫ್‌ನಲ್ಲಿ ಸೋಲಿಸಿತು. ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ಬೆಂಗಳೂರಿನ ಆಸೆಯನ್ನು ಎಸ್ಆರ್ಎಚ್ ಹಾಳುಮಾಡಿತು. ಇದಾದ ಮುಂದಿನ ವರ್ಷ ಅಂದರೆ 2021ರಲ್ಲೂ ಆರ್‌ಸಿಬಿಯ ಕತೆ ಪ್ಲೇಆಫ್‌ನಲ್ಲೇ ಕೊನೆಗೊಂಡಿತು. ಕೆಕೆಆರ್ ತಂಡ ಆರ್‌ಸಿಬಿಯನ್ನು ಎಲಿಮಿನೇಟ್ ಮಾಡಿತು. 2022ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಆರ್‌ಸಿಬಿಯನ್ನು ಪ್ಲೇಆಫ್‌ನಿಂದ ಹೊರಹಾಕಿತು. ಮೂರು ಬಾರಿ ಕಪ್ ಬೇಟೆಯ ಕೊನೆಯ ಕ್ಷಣದಲ್ಲಿ ಆರ್‌ಸಿಬಿ ಹಿನ್ನೆಡೆ ಅನುಭವಿಸಿತು. ಇದರಿಂದಾಗಿ ಈ ಮೂರು ತಂಡಗಳ ಮೇಲೆ ಫಾಫ್ ಡುಪ್ಲೆಸಿಸ್ ಪಡೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಆರ್‌ಸಿಬಿ ಈ ಬಾರಿ ಕಪ್ ಗೆಲ್ಲಲು ಈ ಮೂವರನ್ನೂ ಸೋಲಿಸಲೇಬೇಕು. ಎಲಿಮಿನೇಟರ್‌ನಲ್ಲಿ ರಾಜಸ್ಥಾನವನ್ನು ಸೋಲಿಸಿದರೆ, ಅವರು ಕ್ವಾಲಿಫೈಯರ್-2 ಗೆ ಅರ್ಹತೆ ಪಡೆಯುತ್ತಾರೆ.
ಆರ್‌ಸಿಬಿ ಕ್ವಾಲಿಫೈಯರ್-2ರಲ್ಲಿ ಕೆಕೆಆರ್ ಅಥವಾ ಎಸ್ಆರ್ಎಚ್ ತಂಡವನ್ನು ಎದುರಿಸಲಿದೆ. ಅದರಲ್ಲಿಯೂ ಗೆದ್ದರೆ ಫೈನಲ್ನಲ್ಲಿ ಮತ್ತೆ ಈ ಎರಡು ತಂಡಗಳಲ್ಲಿ ಒಂದನ್ನು ಎದುರಿಸಬೇಕಾಗುತ್ತದೆ. ಪ್ಲೇಆಫ್ ಹಂತಕ್ಕೆ ತಲುಪಿರುವ ಇತರ ಮೂರು ತಂಡಗಳನ್ನು ಮಣಿಸಿ ಡುಪ್ಲೆಸಿಸ್ ತಂಡ ವಿಜೇತರಾಗಿ ಹೊರಹೊಮ್ಮಿದರೆ ಅದು ಐಪಿಎಲ್ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಇದನ್ನು ನೋಡಿದ ಅಭಿಮಾನಿಗಳು ಇದು ದೇವರೇ ಬರೆದ ಸ್ಕ್ರಿಪ್ಟ್ ಎನ್ನುತ್ತಿದ್ದಾರೆ.
ಒಂದು ಹಂತದಲ್ಲಿ ತನ್ನ ಕತೆ ಮುಗಿಸಿದ ಈ ಮೂರು ತಂಡಗಳನ್ನು ಸೋಲಿಸಿ ಕಪ್ ಗೆಲ್ಲಲು ಆರ್‌ಸಿಬಿ ಬರೆದ ಸೇಡಿನ ಕತೆ ಇದಾಗಿದ್ದು, ಈ ಸಲ ಕಪ್ ನಮ್ದೆ ಎಂಬ ಕಾಮೆಂಟ್ಗಳು ಬರುತ್ತಿವೆ. ಆರ್‌ಸಿಬಿ ಸೇಡು ತೀರಿಸಿಕೊಳ್ಳುವ ಕತೆ ಎಷ್ಟು ಯಶಸ್ವಿಯಾಗುತ್ತದೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ. (ಏಜೆನ್ಸೀಸ್)