ನನಗೆ 18 ಅವರಿಗೆ 22 ವರ್ಷ ವಯಸ್ಸಷ್ಟೇ! ಖ್ಯಾತ ಹಾಸ್ಯನಟನ ಜತೆ ಮದ್ವೆ, ಟೀಕೆಗಳನ್ನು ಸಹಿಸದೆ ಕಣ್ಣೀರಿಟ್ಟ ನಟಿ

Redin Kingsley
Published on

ಚೆನ್ನೈ: ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿ ಜೋಡಿಗಳು ಮದುವೆಯಾಗುವುದು ಸಾಮಾನ್ಯ. ಅದರಲ್ಲೂ ನಟ-ನಟಿಯರು ಪ್ರೀತಿಸಿ ಮದುವೆಯಾಗಿರುವ ಸಾಕಷ್ಟು ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಕೆಲವು ಸಂದರ್ಭಗಳಲ್ಲಿ ಈ ರೀತಿಯ ಮದುವೆಗಳು ಜನರಿಗೆ ಖುಷಿಯನ್ನು ನೀಡಿದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಇಂತಹ ಮದುವೆಗಳು ಟೀಕೆಗೂ ಗುರಿಯಾಗುತ್ತವೆ. ಇತ್ತೀಚಿಗೆ ನಟಿಯೊಬ್ಬರು ಇದೇ ರೀತಿಯ ಟೀಕೆಗಳನ್ನು ಎದುರಿಸಿದ್ದು, ಕಣ್ಣೀರಾಕಿದ್ದಾರೆ. ಅಲ್ಲದೆ, ನಮ್ಮನ್ನು ಹೀಗೆ ಟ್ರೋಲ್ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ಕೇಳಿದ್ದಾರೆ. ಸತ್ಯಾಂಶ ತಿಳಿಯದೆ ಏನನ್ನು ಹೇಳಬಾರದು ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

ನಾವೀಗ ಮಾತನಾಡುತ್ತಿರುವುದು ಡಾಕ್ಟರ್​​, ಬೀಸ್ಟ್​ ಮತ್ತು ಜೈಲರ್ ಸಿನಿಮಾದಲ್ಲಿ ನಟಿಸಿರುವ ಸ್ಟಾರ್ ಕಾಮಿಡಿಯನ್ ರೆಡಿನ್ ಕಿಂಗ್ಸ್​ಲೇ ಹಾಗೂ ಜನಪ್ರಿಯ ಕಿರುತೆರೆ ನಟಿ ಸಂಗೀತಾ ವಿ ಜೋಡಿಯ ಬಗ್ಗೆ. ರೆಡಿನ್ ಕಿಂಗ್ಸ್​ಲೇ ಅವರು 2023ರ ಡಿಸೆಂಬರ್​ 10ರಂದು ನಟಿ ಸಂಗೀತಾ ಅವರನ್ನು ಮದುವೆಯಾದರು. ರೆಡಿನ್​ ಕಿಂಗ್ಸ್​ಲೇ 46ನೇ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾದರು. ನಂತರ ಕಾಲಿವುಡ್​ನಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಮದುವೆಯ ನಂತರ ತಮ್ಮ ಮೊದಲ ಹುಟ್ಟುಹಬ್ಬವನ್ನು ರೆಡಿನ್​ ತನ್ನ ಪತ್ನಿಯೊಂದಿಗೆ ಆಚರಿಸಿಕೊಂಡರು. ಅಂದಹಾಗೆ ಸಂಗೀತಾಗೆ ಇದು ಮೊದಲ ಮದುವೆಯಲ್ಲ. ಈ ಹಿಂದೆಯೇ ಕ್ರಿಶ್ ಎಂಬಾತನನ್ನು ಮದುವೆಯಾಗಿದ್ದರು. ಇಬ್ಬರಿಗೂ ಒಂದು ಮಗುವಿದೆ. ವೈಯಕ್ತಿಕ ಕಾರಣಗಳಿಂದ ಇಬ್ಬರು ಬೇರೆಯಾಗಿದ್ದಾರೆ. ಇದಾದ ಬಳಿಕ ರೆಡಿನ್​ ಪ್ರೀತಿಯ ಬಲೆಯಲ್ಲಿ ಬಿದ್ದ ಸಂಗೀತ ಎರಡನೇ ಮದುವೆಯಾಗಿದ್ದಾರೆ.

45ನೇ ವಯಸ್ಸಿನಲ್ಲಿ ಸಂಗೀತ ಎರಡನೇ ಮದುವೆ ಆಗಿದ್ದಕ್ಕೆ ಸಾಕಷ್ಟು ಟೀಕೆ ಮತ್ತು ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಈ ವಯಸ್ಸಿನಲ್ಲಿ ನಿಮಗೆ ಎರಡನೇ ಮದುವೆ ಬೇಕಿತ್ತಾ? ಹಣಕ್ಕಾಗಿ ಹಾಸ್ಯನಟನನ್ನು ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಅಲ್ಲದೆ, ಇಬ್ಬರ ನಡುವೆ ಸಾಕಷ್ಟು ವಯಸ್ಸಿನ ಅಂತರವಿದೆ ಎಂದು ಹೇಳಲಾಗುತ್ತಿದೆ. ಆದರೆ, ಮೂಲಗಳ ಪ್ರಕಾರ, ಸಂಗೀತಾಗೆ 45 ಮತ್ತು ರೆಡಿನ್​ಗೆ 46 ವರ್ಷ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸಂದರ್ಶನದಲ್ಲಿ ಸಂಗೀತಾ ಅವರು ತಮ್ಮ ವಿರುದ್ಧದ ಟ್ರೋಲ್​ಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ವಯಸ್ಸಿನಲ್ಲಿ ಮದುವೆ ಬೇಕಿತ್ತಾ? ಎಂದು ಕೇಳುತ್ತಾರೆ. ಕೇಳಲು ಇದು ಸ್ವಲ್ಪ ವಿಚಿತ್ರವಾಗಿದೆ. ಆದರೆ, ಮಾನಸಿಕವಾಗಿ ನನಗೆ 18 ಮತ್ತು ರೆಡಿನ್​ಗೆ ಕೇವಲ 22 ವಯಸ್ಸು. ನಾವಿಬ್ಬರೂ ಈ ವಯಸ್ಸಿನಲ್ಲಿ ಇದ್ದೇವೆ ಎಂದು ಭಾವಿಸುತ್ತೇವೆ. ನಾನು ಹಣಕ್ಕಾಗಿ ರೆಡಿನ್ ಅವರನ್ನು ಮದುವೆಯಾಗಿದ್ದೇನೆ ಎಂದು ಹಲವರು ಟೀಕಿಸುತ್ತಿದ್ದಾರೆ. ಅದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ಹೇಳಬಲ್ಲಿರಾ? ನಾನು ರೆಡಿನ್ ಅವರ ಸರಳತೆ ಹಾಗೂ ನಮ್ರತೆಯನ್ನು ತುಂಬಾ ಇಷ್ಟಪಡುತ್ತೇನೆ. ನಾನು ಅವರನ್ನು ಪ್ರೀತಿಸಿ ಮದುವೆಯಾಗಿದ್ದೇನೆ ಎನ್ನುವ ಮೂಲಕ ಸಂಗೀತಾ ಟೀಕಾಕಾರರ ಬಾಯಿ ಮುಚ್ಚಿಸಿದರು.

ಇದೇ ಸಂದರ್ಭದಲ್ಲಿ ತನ್ನ ವಿರುದ್ಧದ ಟ್ರೋಲ್‌ಗಳ ಬಗ್ಗೆ ಭಾವುಕಳಾದರು ಮತ್ತು ಇಂತಹ ಟೀಕೆಗಳು ಸೂಕ್ತವಲ್ಲ ಎಂದು ಉತ್ತರಿಸಿದರು.

ಇನ್ನು ರೆಡಿನ್ ವಿಚಾರಕ್ಕೆ ಬಂದರೆ ತಮಿಳು ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಪ್ಯಾನ್​ ಇಂಡಿಯಾ ಪರಿಕಲ್ಪನೆ ಬಂದ ಬಳಿಕ ಎಲ್ಲ ಭಾಷೆಯ ಸಿನಿರಸಿಕರನ್ನು ತಮ್ಮ ಕಾಮಿಡಿ ಮೂಲಕವೇ ಸೆಳೆದಿದ್ದಾರೆ. ಜೈಲರ್, ಡಾಕ್ಟರ್, ಕಂಜ್ಯೂರಿಂಗ್ ಕಣ್ಣಪ್ಪನ್ ಮುಂತಾದ ಸಿನಿಮಾಗಳಲ್ಲಿ ರೆಡಿನ್ ಅವರ ಕಾಮಿಡಿ ಎಲ್ಲರನ್ನು ನಕ್ಕು ನಗಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net