

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತಿಯ 68ನೇ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಮಗಳೂರು ಹಾಗೂ ಚೆನ್ನೈ ಸೂಪರ್ಕಿಂಗ್ಸ್ ಮುಖಾಮುಖಿಯಾಗಿದ್ದು, ಉಭಯ ತಂಡಗಳಿಗು ಈ ಪಂದ್ಯ ಮಹತ್ವದಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದಿರುವ ಆರ್ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಉತ್ತಮ ಆರಂಭ ಒದಗಿಸಿದ್ದು, 3ನೇ ಓವರ್ ಅಂತ್ಯದ ವೇಳೆ ಮಳೆರಾಯನ ಆಗಮನವಾಗಿದ್ದು, ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನೂ ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಚೆನ್ನಯ ವಿರುದ್ಧ ಬ್ಯಾಟಿಂಗ್ ಮಾಡುವ ವೇಳೆ 13 ರನ್ ಗಳಿಸಿದಾಗ ತಂಡ ಒಂದರ ಪರ ತವರು ಮೈದಾನದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಆರ್ಸಿಬಿ ಪರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3005 ರನ್ ಗಳಿಸಿದ್ದು, ತಂಡ ಒಂದರ ತವರು ಮೈದಾನದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ನಂತರ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ (2295 ರನ್), ಎಬಿ ಡಿವಿಲಿಯರ್ಸ್ (1960 ರನ್) ನಂತರದ ಸ್ಥಾನದಲ್ಲಿದ್ದಾರೆ.
2008ರಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಪರ ಕಣಕ್ಕಿಳಿದ ವಿರಾಟ್ ಕೊಹ್ಲಿ ಈವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 22 ಅರ್ಧಶತಕ, 4 ಶತಕಗಳನ್ನು ಸಿಡಿಸಿದ್ದಾರೆ. ಇದಲ್ಲದೆ ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ 76 ರನ್ ಗಳಿಸಿದರೆ ಐಪಿಎಲ್ನಲ್ಲಿ 8,000 ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಆರ್ಸಿಬಿ ಹಾಗೂ ಚೆನ್ನೈ ಪಾಲಿಗೆ ಈ ಪಂದ್ಯ ಮಹತ್ವದಾಗಿದ್ದು, ಗೆದ್ದ ತಂಡ ಪ್ಲೇಆಫ್ ಪ್ರವೇಶಿಸಲಿದೆ. ಉಭಯ ತಂಡಗಳು ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು, ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್ವೆಲ್, ಸಿಎಸ್ಕೆ ಪರ ಮೊಯಿನ್ ಅಲಿ ಬದಲು ಮಿಚೆಲ್ ಸ್ಯಾಂಟ್ನರ್ ಕಣಕ್ಕಿಳಿದಿದ್ದಾರೆ.