

ಬೆಂಗಳೂರು: ನಾಡಿನೆಲ್ಲೆಡೆ ಯುಗಾದಿ ಸಂಭ್ರಮ ಜೋರಾಗಿದ್ದು, ರಾಜ್ಯದ ಜನರು ಕುಟುಂಬ ಸಮೇತ ಹೊಸ ವರ್ಷದ ಹಬ್ಬದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಸಂದರ್ಭಕ್ಕೆ ಅನುಗುಣವಾಗುವಂತೆ ತಮ್ಮ ತಂಡವನ್ನು ಪ್ರತಿ ಪಂದ್ಯದಲ್ಲಿ ಬೆನ್ನುತಟ್ಟಿ, ಎಲ್ಲೇ ಮೀರಿ ಪ್ರೋತ್ಸಾಹಿಸುವ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕಳೆದ 16 ವರ್ಷಗಳಿಂದ ಸತತವಾಗಿ ಆರ್ಸಿಬಿ ತಂಡವನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವ ಕನ್ನಡಿಗರು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ವಿಶೇಷವಾಗಿ ತಿಳಿಸಲು ಆರ್ಸಿಬಿ ತಂಡದ ವಿಕೆಟ್ ಕೀಪರ್, ಸ್ಪೋಟಕ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಲಮ್ರೋರ್, ಎಸ್. ದಯಾಳ್, ವಿಜಯ್ ಕುಮಾರ್ ವೈಶಾಕ್, ವುಮೆನ್ಸ್ ಆರ್ಸಿಬಿ ತಂಡದ ಆಟಗಾರ್ತಿ, ಕನ್ನಡತಿ ಶ್ರೇಯಾಂಕ ಪಾಟೀಲ್ ನಾಡಿನ ಸಮಸ್ತ ಜನತೆಗೆ ಯುಗಾದಿ ಶುಭಾಶಯ ತಿಳಿಸಿದ್ದಾರೆ.
ಒಂದೆಡೆ ತಮ್ಮ ನೆಚ್ಚಿನ ತಂಡದ ಆಟಗಾರರು ಶುಭಕೋರಿದ್ದಕ್ಕೆ ಕೆಲವರು ಸಂತಸಪಟ್ಟರೆ, ಇನ್ನು ಕೆಲವರು ಮೊದಲು ಪಂದ್ಯದ ಮೇಲೆ ಹೆಚ್ಚು ಗಮನಹರಿಸಿ, ಉಳಿದದ್ದು ಆಮೇಲೆ ಎಂದಿದ್ದಾರೆ. ಮತ್ತೊಬ್ಬರು ನೀವು ಕಪ್ ಗೆದ್ರೆ ಪ್ರತಿದಿನ ನಮಗೆ ಯುಗಾದಿ ಹಬ್ಬನೇ, ಮೊದಲು ಪಂದ್ಯಗಳನ್ನು ಗೆಲ್ಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕಮೆಂಟ್ ಮಾಡಿದ್ದಾರೆ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದಕ್ಕೆ ಆರ್ಸಿಬಿ ಅಭಿಮಾನಿಗಳು ಭಾರೀ ಬೇಸರ ಹೊರಹಾಕಿದ್ದರು. ಸತತ ಸೋಲಿಗೆ ಕಾರಣ ಆಟಗಾರರೂ ಹೌದು. ಅದಕ್ಕಿಂತ ಹೆಚ್ಚಾಗಿ ಮ್ಯಾನೆಜ್ಮೆಂಟ್ ವೈಫಲ್ಯವೇ ಆರ್ಸಿಬಿಯ ಸತತ ಸೋಲಿಗೆ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ತಂಡದ ಮೇಲಿನ ಅಸಮಾಧಾನ ಎಂದಿನಂತೆ ಮುಂದುವರೆದಿದೆ. ಮುಂಬರುವ ಮ್ಯಾಚ್ಗಳಲ್ಲಿ ಆದರೂ ತಂಡ ಗೆದ್ದು ಬರಲಿ ಎಂದು ಫ್ಯಾನ್ಸ್ ಆಶಿಸಿದ್ದಾರೆ.