ಈ ವರ್ಷದ ಐಪಿಎಲ್​ ಕಪ್​ ಆರ್​ಸಿಬಿಗೆ ಹೋಗಬೇಕು! ಕೊಹ್ಲಿ ತಂಡದ ಬಗ್ಗೆ ಮಾಜಿ CSK ಆಟಗಾರ ಗುಣಗಾನ | RCB

ವಿಜಯವಾಣಿ - 2025-05-04T162504.340
Published on

RCB: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿ ಹಲವು ರೋಚಕ, ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಮೇ.03ರಂದು ನಡೆದ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯ ಸೇರಿದಂತೆ ಐಪಿಎಲ್​ 10 ತಂಡಗಳ ಪಂದ್ಯಗಳೂ ಹಲವು ದಾಖಲೆಗಳು, ಅದ್ಭುತ ಇನ್ನಿಂಗ್ಸ್​ಗೆ ಸಾಕ್ಷಿಯಾಗಿವೆ.

ಇದಕ್ಕೆ ಅದ್ಭುತ ನಿದರ್ಶನ ನಿನ್ನೆ (ಮೇ.03) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯ. ಕೇವಲ 2 ರನ್​ಗಳಿಂದ ಗೆದ್ದ ಬೆಂಗಳೂರು ಪಡೆ, ತವರಿನಲ್ಲಿ ಭರ್ಜರಿಯಾಗಿ ಸಂಭ್ರಮಿಸಿತು. ಈ ಮೂಲಕ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಆರ್​ಸಿಬಿ, ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿದೆ. ಆಡಿರುವ 11 ಪಂದ್ಯಗಳಲ್ಲಿ ಒಟ್ಟು 8 ಪಂದ್ಯ ಗೆದ್ದಿರುವ ಆರ್​ಸಿಬಿ, ಕೇವಲ 3 ಮ್ಯಾಚ್​ನಲ್ಲಿ ಮಾತ್ರ ಸೋಲು ಅನುಭವಿಸಿದೆ. ಸದ್ಯ ಆರ್​ಸಿಬಿ, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್​ ಮತ್ತು ಪಂಜಾಬ್ ಕಿಂಗ್ಸ್​ ಟಾಪ್​ 4ರಲ್ಲಿ ಇದ್ದು, ಪ್ಲೇಆಫ್ ಕನಸನ್ನು ಜೀವಂತವಾಗಿ ಉಳಿಸಿಕೊಳ್ಳುವ ತವಕದಲ್ಲಿದೆ.

ಇನ್ನು ಸಿಎಸ್​ಕೆ ವಿರುದ್ಧವು ರೋಚಕ ಗೆಲುವು ದಾಖಲಿಸಿದ ಬೆಂಗಳೂರು ಪಡೆಗೆ ವ್ಯಾಪಕ ಅಭಿಮಾನ, ಮೆಚ್ಚುಗೆಗಳು ಹರಿದುಬಂದಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ಸೇರಿದಂತೆ ಪ್ಲೇಆಫ್ ರೇಸ್​ಗೆ ಸಖತ್ ಪೈಪೋಟಿ ಕೊಡುವ ತಂಡಗಳ ಮಧ್ಯೆ 18ನೇ ಆವೃತ್ತಿಯಲ್ಲಿ ಆರ್​ಸಿಬಿ ಟ್ರೋಫಿ ಸ್ವೀಕರಿಸಿದರೆ ನನಗೆ ಬಹಳ ಖುಷಿಯಾಗಲಿದೆ ಎಂದು ಸಿಎಸ್​ಕೆ ಮಾಜಿ ಆಟಗಾರ ಸುರೇಶ್ ರೈನಾ ಅಭಿಪ್ರಾಯಿಸಿದ್ದಾರೆ.

"ಈ ವರ್ಷದ ಐಪಿಎಲ್​ ಟ್ರೋಫಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸಲ್ಲಬೇಕು. ಅದರಲ್ಲೂ ವಿರಾಟ್​ ಕೊಹ್ಲಿ ಟ್ರೋಫಿ ಎತ್ತಿಹಿಡಿದ್ರೆ ನನಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಆರ್​ಸಿಬಿ ತಂಡವನ್ನು ಕಟ್ಟಿರುವುದೇ ಆತ. ಫ್ರಾಂಚೈಸಿಯ ಡ್ರೆಸ್ಸಿಂಗ್​ ರೂಮ್​ನಲ್ಲಿ ಒಳ್ಳೆಯ ವಾತಾವರಣವಿದೆ. ಇದರಿಂದ ಆಟಗಾರರಲ್ಲಿ ಆತ್ಮವಿಶ್ವಾಸವು ಹೆಚ್ಚಿದೆ. ಇದು ಪಂದ್ಯ ಗೆಲ್ಲಲು ಕೂಡ ಉತ್ತಮವಾಗಿದೆ" ಎಂದು ರೈನಾ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net