ಶ್ರೀರಂಗಪಟ್ಟಣ: ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಹಿಂದು ಪ್ರವಾಸಿರ ಹತ್ಯೆ ಮಾಡಿದ ಉಗ್ರರು ಹಾಗೂ ದೃಷ್ಕೃತ್ಯಕ್ಕೆ ಬೆಂಬಲ ನೀಡಿದವರಿಗೆ ತಕ್ಕ ಪಾಠ ಕಲಿಸುವಂತೆ ಕೇಂದ್ರ ಬಿಜೆಪಿ ಸರ್ಕಾರವನ್ನು ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.

ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಗುರುವಾರ ಸಂಜೆ ಜಮಾಯಿಸಿದ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಭಯೋತ್ಪಾದಕ ಚಟುವಟಿಕೆಗೆ ಉಗ್ರರ ಮೂಲಕ ಕುಮ್ಮಕ್ಕು ನೀಡುತ್ತಿರುವ ನೆರೆ ರಾಷ್ಟ್ರ ಹಾಗೂ ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದೇಶದ್ರೋಹಿ ಹೇಳಿಕೆ ನೀಡುವ ರಾಜಕೀಯ ನಾಯಕರು ಮತ್ತು ಮುಖಂಡರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಗ್ರರ ದಾಳಿಯಲ್ಲಿ ಹತರಾದ 26 ಅಮಾಯಕ ಜೀವಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಭಾರತ ಭಯೋತ್ಪಾದಕ ಕೃತ್ಯಗಳನ್ನು ಬೇರು ಸಹಿತ ಕಿತ್ತು ಹಾಕುವ ಸಮಯ ಎದುರಾಗಿದೆ. ಶಾಂತಿಯ ನೆಲದಲ್ಲಿ ಅಮಾಯಕರ ರಕ್ತ ಹರಿಸಿ ದುಷ್ಕೃತ್ಯದ ನಡೆಯನ್ನು ದೇಶ ಹಾಗೂ ದೇಶವಾಸಿಗಳು ಜಾತಿ, ಧರ್ಮ ತಾರತಮ್ಯ ತೋರದೆ ಖಂಡಿಸಬೇಕು ಎಂದು ಹೇಳಿದರು.
ಇದು ಭಾರತ ಹಾಗೂ ಭಾರತೀಯರ ಅಸ್ಮಿತೆಯ ಮೇಲಾಗುತ್ತಿರುವ ದಾಳಿಯಾಗಿದ್ದು, ಇದಕ್ಕೆ ಯುದ್ಧದ ಮೂಲಕ ಉಗ್ರ ಸ್ವರೂಪದಲ್ಲೇ ತಕ್ಕ ಪಾಠ ಕಲಿಸಬೇಕಾಗಿದೆ. ಇಂಥ ಸಮಯದಲ್ಲಿ ದೇಶದ ಜನರು, ರಾಜಕೀಯ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್ ಷಾ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರಗಳ ಜತೆಗೆ ಬೆಂಬಲ ಸೂಚಿಸಿ ಜತೆಯಾಗಬೇಕು. ಆದರೆ ಶತ್ರು ದೇಶದ ಪರ ಬೆಂಬಲಿಸಿ ದೇಶ ದ್ರೋಹಿ ಹೇಳಿಕೆ ನೀಡುವ ವ್ಯಕ್ತಿಗಳನ್ನು ಶತ್ರುಗಳಂತೆ ಕಠಿಣ ಕ್ರಮಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಳಪಡಿಸಬೇಕು ಎಂದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಮುಖಂಡರಾದ ಕೆ.ಶೆಟ್ಟಹಳ್ಳಿ ಮಹಾಲಿಂಗು, ಶಿವರಾಜು, ಮರಳಗಾಲ ಶಂಕರ್, ಶಿವಣ್ಣ, ಮಂಜುನಾಥ್, ರಾಮಚಂದ್ರು, ದರಸಗುಪ್ಪೆ ನಾಗಣ್ಣ, ಜಗದೀಶ್, ಮಹೇಶ್, ರಾಮಕೃಷ್ಣ ಇತರರು ಇದ್ದರು.