ಮುಂದಿನ 3 ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ! ಇಲ್ಲಿದೆ ಅಚ್ಚರಿ ವರದಿ | Gold Price

ವಿಜಯವಾಣಿ - 2025-05-04T153257.217
Published on

Gold Price: ಚಿನ್ನ ಎಂಬ ಪದ ಕೇಳಿದಾಕ್ಷಣ ಜನರ ಕುತೂಹಲ ದುಪ್ಪಟ್ಟಾಗುತ್ತದೆ. ಚಿನ್ನದ ಖರೀದಿಗಾಗಿ ಬಹಳ ಉತ್ಸಾಹ ತೋರುತ್ತಿರುವ ಜನರು, ಟ್ರಂಪ್ ಸುಂಕ ಸಮರದಿಂದ ಗೋಲ್ಡ್​ ಬೆಲೆ ಏರಿಕೆಯಾದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 90 ದಿನಗಳ ಟ್ರಂಪ್ ಸುಂಕ ಕದನ ವಿರಾಮದ ಬಳಿಕ ಚೀನಾ ಜೊತೆಗಿನ ವ್ಯಾಪಾರ ಯುದ್ಧದಿಂದ ಇದೀಗ ಚಿನ್ನದ ಬೆಲೆಯಲ್ಲಿ ದಿನ ಕಳೆದಂತೆ ಏರಿಕೆ-ಇಳಿಕೆ ಕಾಣುತ್ತಿದೆ. ಇದು ಚಿನ್ನದ ಗ್ರಾಹಕರಲ್ಲಿ ದೊಡ್ಡ ಗೊಂದಕ ಮೂಡಿಸಿದೆ.

ಮದುವೆ ಸೀಸನ್​ ಶುರು

ಕಳೆದ ಹತ್ತು ದಿನಗಳವರೆಗೂ ಚಿನ್ನದ ಬೆಲೆ ಗಗನಕ್ಕೇರಿತ್ತು. ಇದರೊಂದಿಗೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂ. ಕೂಡ ದಾಟಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗಣನೀಯವಾಗಿ ಕುಸಿಯುತ್ತಿವೆ. ಪ್ರಸ್ತುತ, 24 ಕ್ಯಾರೆಟ್ ಚಿನ್ನದ ಬೆಲೆ 93,000 ರೂ.ಗೆ ಇಳಿದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ, ಸ್ಪಾಟ್ ಚಿನ್ನವು ಔನ್ಸ್‌ಗೆ 3,255.60 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಇದು ಶೇ. 1.8ರಷ್ಟು ಕಡಿಮೆಯಾಗಿದೆ. ಆದಾಗ್ಯೂ, ಮುಂದಿನ ಮೂರು ತಿಂಗಳಲ್ಲಿ ಚಿನ್ನದ ದರ 93,000 ರೂ.ನಿಂದ 88,000 ರೂ.ಗೆ ಬಂದಿಳಿಯಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

ಚಿನ್ನದ ಬೆಲೆಯಲ್ಲಿ ಇಳಿಕೆ!

ಕಳೆದ ವರ್ಷ ಏಪ್ರಿಲ್‌ನಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 75,000 ರೂ. ಇತ್ತು. ಅಂದಿನಿಂದ, ಚಿನ್ನದ ಬೆಲೆ ಸುಮಾರು ಶೇ. 25ರಷ್ಟು ಹೆಚ್ಚಾಗಿದೆ. ಏಂಜಲ್ ಒನ್‌ನ ಸರಕು ಮತ್ತು ಕರೆನ್ಸಿಗಳ ಮುಖ್ಯ ತಾಂತ್ರಿಕ ಸಂಶೋಧನಾ ವಿಶ್ಲೇಷಕ ತೇಜಸ್ ಅನಿಲ್ ಶಿಗ್ರೇಕರ್ ಮಾತನಾಡಿ, "ಅಂತರರಾಷ್ಟ್ರೀಯ ವ್ಯಾಪಾರ ಉದ್ವಿಗ್ನತೆಗಳು ಕಡಿಮೆಯಾಗಿವೆ. ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರ ಯುದ್ಧದ ಜೊತೆಗೆ ದಕ್ಷಿಣ ಕೊರಿಯಾ, ಜಪಾನ್ ಮತ್ತು ಭಾರತದೊಂದಿಗೆ ಸಂಭಾವ್ಯ ವ್ಯಾಪಾರ ಒಪ್ಪಂದಗಳ ಕುರಿತು ಡೊನಾಲ್ಡ್ ಟ್ರಂಪ್ ಅವರ ಸಮರ ಸ್ವಲ್ಪಮಟ್ಟಿಗೆ ಕುಸಿದಿದೆ. ಇದು ಚಿನ್ನದ ಬೆಲೆ ಕುಸಿಯಲು ಪ್ರಮುಖ ಕಾರಣ" ಎಂದು ಹೇಳಿದ್ದಾರೆ.

ನಿರ್ಮಲ್ ಬ್ಯಾಂಗ್ ಕಮಾಡಿಟೀಸ್‌ನ ಸಂಶೋಧನಾ ಮುಖ್ಯಸ್ಥ ಕುನಾಲ್ ಶಾ, "ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಅಂತರರಾಷ್ಟ್ರೀಯ ಚಿನ್ನದ ಬೆಲೆ ಔನ್ಸ್‌ಗೆ 3,000 ಅಥವಾ 2,950 ಡಾಲರ್​ ತಲುಪಲಿದೆ" ಎಂದು ಅಭಿಪ್ರಾಯಿಸಿದ್ದಾರೆ. ಭಾರತದಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ದರ 88,000ಕ್ಕಿಂತ ಕಡಿಮೆಯಾಗಲಿದೆ ಎಂದು ಅಂದಾಜಿಸಿದ್ದಾರೆ. ಏಂಜಲ್ ಒನ್‌ನ ಅನಿಲ್ ಶಿಗ್ರೇಕರ್ ಸಹ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವ್ಯಾಪಾರ ಉದ್ವಿಗ್ನತೆ ಕುಸಿಯುವುದರಿಂದ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಕಡಿತಗೊಳಿಸಲಿದ್ದಾರೆ. ಹೀಗಾಗಿ ಮುಂಬರುವ ಕೆಲವು ತಿಂಗಳುಗಳಲ್ಲಿ ಚಿನ್ನದ ದರ ಮತ್ತಷ್ಟು ಕುಸಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net