ಆರ್​ಸಿಬಿಗೆ ಶೀಘ್ರವೇ ಹೊಸ ಕೋಚ್​ ನಿರೀಕ್ಷೆ; ಹೆಸ್ಸನ್​, ಬಂಗಾರ್​ಗೆ ಗೇಟ್​ಪಾಸ್​​?

rcb web
Published on

ಬೆಂಗಳೂರು: ಮುಂದಿನ ವರ್ಷದ ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಹೊಸ ತರಬೇತಿ ಬಳಗದೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಹರಡಿದೆ. ತಂಡದ ಹಾಲಿ ಕ್ರಿಕೆಟ್​ ನಿರ್ದೇಶಕ ಮೈಕ್​ ಹೆಸ್ಸನ್​ ಮತ್ತು ಮುಖ್ಯ ಕೋಚ್​ ಸಂಜಯ್​ ಬಂಗಾರ್​ ಜತೆಗಿನ ಒಪ್ಪಂದವನ್ನು ಆರ್​ಸಿಬಿ ಕೊನೆಗೊಳಿಸಲಿದೆ ಎಂದು ವರದಿಯಾಗಿದೆ.

ಆರ್​ಸಿಬಿ ತಂಡದ ತರಬೇತಿ ಬಳಗದ ಹಾಲಿ ಒಪ್ಪಂದ ಮುಂದಿನ ಸೆಪ್ಟೆಂಬರ್​ಗೆ ಕೊನೆಯಾಗಲಿದೆ. ಅದಕ್ಕೆ ಮುನ್ನ ಅವರ ನಿರ್ವಹಣೆಯ ಬಗ್ಗೆ ಆರ್​ಸಿಬಿ ತಂಡದ ಮ್ಯಾನೇಜ್​ಮೆಂಟ್​ ಪರಾಮರ್ಶೆ ನಡೆಸಲಿದ್ದು, ಶೀಘ್ರವೇ ಅಂತಿಮ ನಿರ್ಧಾರಕ್ಕೆ ಬರಲಿದೆ ಎನ್ನಲಾಗಿದೆ.

ಆರ್​ಸಿಬಿ ತಂಡ ಐಪಿಎಲ್​ನಲ್ಲಿ ಕಳೆದ 16 ಆವೃತ್ತಿಗಳಿಂದಲೂ ಪ್ರಶಸ್ತಿ ಗೆದ್ದಿಲ್ಲ. ಹೆಸ್ಸನ್​ ಮತ್ತು ಬಂಗಾರ್​ ಕಳೆದ 5 ವರ್ಷಗಳಿಂದ ತಂಡದ ತರಬೇತಿ ಬಳಗದಲ್ಲಿದ್ದರೂ, ಪ್ರಶಸ್ತಿ ಗೆಲುವಿನ ಬರ ನೀಗಿಲ್ಲ. ಇವರಿಬ್ಬರು ಮಾಜಿ ನಾಯಕ ವಿರಾಟ್​ ಕೊಹ್ಲಿ ಜತೆಗೆ ಉತ್ತಮ ಸಂಬಂಧ ಹೊಂದಿದ್ದರೂ, ಪ್ರಶಸ್ತಿ ಗೆಲ್ಲಿಸಿಕೊಡದಿರುವ ಕಾರಣ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ನ್ಯೂಜಿಲೆಂಡ್​ನ ಮೈಕ್​ ಹೆಸ್ಸನ್​ 2019ರಿಂದ ತಂಡದ ತರಬೇತಿ ಬಳಗದಲ್ಲಿದ್ದರೆ, ಬಂಗಾರ್​ ಕಳೆದ ವರ್ಷ ತಂಡದ ಮುಖ್ಯ ಕೋಚ್​ ಆಗಿ ಬಡ್ತಿ ಪಡೆದಿದ್ದರು. ಆರ್​ಸಿಬಿ ತಂಡ 2020ರಿಂದ 2022ರವರೆಗೆ ಸತತ 3 ವರ್ಷ ಪ್ಲೇಆಫ್​ಗೇರಿದ್ದರೂ, ಫೈನಲ್​ಗೇರಲು ವಿಫಲವಾಗಿತ್ತು. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಪ್ಲೇಆಫ್​ಗೂ ಪ್ರವೇಶಿಸಿರಲಿಲ್ಲ. ಮೈಕ್​ ಹೆಸ್ಸನ್​ ಮಹಿಳೆಯರ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲೂ ಆರ್​ಸಿಬಿ ಮಹಿಳಾ ತಂಡಕ್ಕೆ ಕೋಚ್​ ಆಗಿದ್ದರು. ಆದರೆ ಸ್ಮೃತಿ ಮಂದನಾ ನೇತೃತ್ವದ ತಂಡ 5 ತಂಡಗಳ ಪೈಕಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net