

ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳ ಮೂಲಕ ಶುರು ಮಾಡಿ ಭರ್ಜರಿ ಗೆಲುವಿನ ಮೂಲಕ ಕಮ್ಬ್ಯಾಕ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 15 ದಿನದ ಅಂತರದಲ್ಲಿ 17ನೇ ಆವೃತ್ತಿಯ ಟೂರ್ನಿಯ ಚಿತ್ರಣವನ್ನೇ ಬದಲಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿರುವುದು ಎಲ್ಲರ ಹುಬ್ಬೇರಿಸಿದೆ.
ಮಾರ್ಚ್ 22ರಂದು ಆರಂಭಗೊಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋಲುವ ಮೂಲಕ ಅಭಿಯಾನ ಆರಂಭಿಸಿದ ಆರ್ಸಿಬಿ ಬಳಿಕ ಪಂಜಾಬ್ ಕಿಂಗ್ಸ್ ಎದುರು ಗೆದ್ದು ಬೀಗಿತ್ತು. ಆ ಬಳಿಕ ಸತತ ಆರು ಪಂದ್ಯಗಳಲ್ಲಿ ಸೋತು 10ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ತಂಡವು ಪ್ಲೇಆಫ್ ಪ್ರವೇಶಿಸುವುದು ಕಷ್ಟ ಎಂದು ಹೇಳಲಾಗಿತ್ತು. ಶೇ.01ರಷ್ಟು ಅವಕಾಶವನ್ನು ಹೊಂದಿದ್ದ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿದ್ದು ಮಾತ್ರ ರಣರೋಚಕ.
ಏಪ್ರಿಲ್ 21ರಂದು ಕೆಕೆಆರ್ ಎದುರು 1 ರನ್ಗಳ ವಿರೋಚಿತ ಸೋಲು ಕಂಡ ಬಳಿಕ ಪುಟಿದೆದ್ದ ಫಾಫ್ ಡು ಪ್ಲೆಸಿಸ್ ಪಡೆಯೂ ಲೀಗ್ ಹಂತದ ಕೊನೆಯ ಪಂದ್ಯದವರೆಗೂ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಮೂಲಕ ಯಶಸ್ವಿಯಾಗಿ ಪ್ಲೇಆಫ್ ಪ್ರವೇಶಿಸಿತ್ತು. ಮೂರು ವಾರಗಳ ಅವಧಿಯಲ್ಲಿ ಆರ್ಸಿಬಿ ಐಪಿಎಲ್ನ ಚಿತ್ರಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದು, ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದಾರೆ. ಸತತ ಗೆಲುವಿನ ಮೂಲಕ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿಸುವ ಉತ್ಸಾಹದಲ್ಲಿದ್ದ ತಂಡಗಳನ್ನು ಲೀಗ್ ಹಂತದಲ್ಲೇ ಹೊರದಬ್ಬುವಲ್ಲಿ ಯಶಸ್ವಿಯಾಯಿತು. ಇದಲ್ಲದೆ ಉತ್ತಮ ರನ್ರೇಟ್ ಆಧಾರದ ಮೇಲೆ ಪ್ಲೇಆಫ್ ಪ್ರವೇಶಿಸಿತ್ತು.
ಈ ಮೂಲಕ ಆರ್ಸಿಬಿ ಪಾಲಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. ಇದೀಗ ಎಲಿಮಿನೇಟರ್ ಪಂದ್ಯಕ್ಕೆ ಅರ್ಹತೆ ಪಡೆದಿರುವ ಆರ್ಸಿಬಿ ಪಾಲಿಗೆ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಮೇ 22 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ರಾಜಸ್ಥಾನ ವಿರುದ್ಧ ಗೆದ್ದರೆ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ಗೇರಲಿದೆಯಾ ಎಂದು ಕಾದು ನೋಡಬೇಕಿದೆ.