

ರಾಜಸ್ಥಾನ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಪಂದ್ಯಗಳು ಆರಂಭಗೊಳ್ಳಲು ಇದೀಗ ದಿನಗಣನೆ ಆರಂಭಗೊಂಡಿದೆ. ಆದರೆ ಮುಂಬರುವ ತಿಂಗಳಲ್ಲಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ತಂಡದ ಪಂದ್ಯಗಳಿಗೆ ಇದೀಗ ತೊಡಕು ಉಂಟಾಗಿದ್ದು, ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಅನ್ನು ರಾಜಸ್ಥಾನ ಸ್ಪೋರ್ಟ್ಸ್ ಕೌನ್ಸಿಲ್ ಸೀಲ್ ಮಾಡಿದೆ. ಇದಕ್ಕೆ ಕಾರಣ ರಾಜ್ಯ ಕ್ರಿಕೆಟ್ ಸಂಸ್ಥೆಯು ಬಾಕಿ ಪಾವತಿ ಸೇರಿದಂತೆ ತನ್ನ ಹೊಣೆಗಾರಿಕೆಗಳನ್ನು ಪೂರೈಸಿಲ್ಲ ಎಂದು ಪ್ರಕರಣೆಯಲ್ಲಿ ಆರೋಪಿಸಲಾಗಿದೆ.
ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ (RCA) ಕಚೇರಿ ಮತ್ತು ಅದರ ಅಕಾಡೆಮಿಯನ್ನು ಸಹ ಸ್ಟೇಡಿಯಂನೊಂದಿಗೆ ಸೀಲ್ ಮಾಡಲಾಗಿದೆ ಎಂದು ವರದಿಯಾಗಿದೆ. ಆರ್‌ಸಿಎ ಬಾಕಿಯಿರುವ ಬಾಕಿಗಳ ಕುರಿತು ನೋಟಿಸ್ ನೀಡಿದ್ದು, ಇದರ ಅಧಾರದ ಮೇರೆಗೆ ಇದೀಗ ಸ್ಟೇಡಿಯಂ ಅನ್ನು ಮುಚ್ಚಲಾಗಿದೆ.
ರಾಜಸ್ಥಾನ ಸ್ಪೋರ್ಟ್ಸ್ ಕೌನ್ಸಿಲ್ ಕಾರ್ಯದರ್ಶಿಯಾದ ಸೋಹನ್ ರಾಮ್ ಚೌಧರಿ, ಶುಕ್ರವಾರ ರಾಜ್ಯ ಕೌನ್ಸಿಲ್‌ಗೆ ಆಸ್ತಿಯನ್ನು ಹಸ್ತಾಂತರಿಸುವಂತೆ ಆರ್‌ಸಿಎಗೆ ನೋಟಿಸ್ ನೀಡಿದ್ದರು. ಆದರೆ ಅದು ನಡೆಯಲಿಲ್ಲ. ಹಸ್ತಾಂತರವು ಸಂಭವಿಸದ ಕಾರಣ, ತಿಳುವಳಿಕೆಯ ಒಪ್ಪಂದದ (MOU) ಪ್ರಕಾರ ತನ್ನ ಷರತ್ತುಗಳನ್ನು ಪೂರೈಸಲು ಸಾಧ್ಯವಾಗದೆ ಮತ್ತು ಬಾಕಿ ಪಾವತಿಸದ ಕಾರಣ ರಾಜ್ಯ ಕ್ರೀಡಾ ಮಂಡಳಿಯು ಆಸ್ತಿಗಳನ್ನು ಸೀಲ್ ಮಾಡಲು ಮುಂದಾಯಿತು ಎನ್ನಲಾಗಿದೆ.
"ನಾವು ಅವರಿಗೆ ಹಲವಾರು ನೋಟಿಸ್‌ಗಳನ್ನು ಕಳುಹಿಸಿದ್ದೆವು. ಆದರೆ ಅವರ ಕಡೆಯಿಂದ ನಮಗೆ ಯಾವುದೇ ಉತ್ತರ ಸಿಕ್ಕಿಲ್ಲ. ಎಂಒಯು ಅನ್ನು 10 ವರ್ಷಗಳಿಗೆ (ಎಂಟು ವರ್ಷಗಳಿಂದ) ಹೆಚ್ಚಿಸುವ ಕುರಿತಾಗಿ ಮಾತ್ರ ಉತ್ತರಿಸಿದ್ದಾರೆ. ಅವರಿಗಿದ್ದ ಹೊಣೆಗಾರಿಕೆಗಳನ್ನು ಪೂರೈಸುವಲ್ಲಿ ಅವರು ವಿಫಲರಾಗಿದ್ದಾರೆ" ಎಂದು ಚೌಧರಿ ಮಾಧ್ಯಮಕ್ಕೆ ತಿಳಿಸಿದರು.
"ಆದಾಗ್ಯೂ ಕೂಡ ಐಪಿಎಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಈಗಾಗಲೇ ಶೆಡ್ಯೂಲ್ ಕೂಡ ಹೊರಬಿದ್ದಿದೆ. ಹಾಗಾಗಿ, ರಾಜಸ್ಥಾನ ರಾಯಲ್ಸ್ ತಂಡದ ಎಲ್ಲಾ ಪಂದ್ಯಗಳನ್ನು ಇಲ್ಲಿಯೇ ಆಯೋಜಿಸಲಾಗುತ್ತದೆ. ಆಯೋಜನೆಗೊಂಡಿರುವ ಅಷ್ಟು ಪಂದ್ಯಗಳು ಮತ್ತು ಇತರ ಎಲ್ಲಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳು ಸಹ ನಡೆಯಲಿದ್ದು, ಆಟಗಾರರಿಗೆ ಎಂದಿನಂತೆ ಸೌಲಭ್ಯಗಳು ಸಿಗುತ್ತವೆ" ಎಂದು ಭರವಸೆ ನೀಡಿದರು,(ಏಜೆನ್ಸೀಸ್).