ರಿಪ್ಪನ್‌ಪೇಟೆ: ಚುನಾವಣಾ ಪೂರ್ವದಲ್ಲಿ ನೀಡಿದ ಆಶ್ವಾಸನೆಯಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ರಾಜ್ಯದ ಜನಸಾಮಾನ್ಯರಿಗೆ ಜೀವನ ಸಾಗಿಸಲು ರಾಜ್ಯ ಸರ್ಕಾರ ಧೈರ್ಯ ತುಂಬಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಅರಸಾಳು ಗ್ರಾಪಂ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದಲ್ಲಿ ಜೆಜೆಎಂ ಕುಡಿಯುವ ನೀರಿನ ಯೋಜನೆಯಡಿ 6.12 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಜನಪರವಾದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನ ಸಂತೋಷಗೊಂಡಿದ್ದಾರೆ. ವಿಶೇಷವಾಗಿ ಕೂಲಿ ಕಾರ್ಮಿಕರು, ಬಡಜನತೆ ಸರ್ಕಾರದ ಯೋಜನೆಗಳು ನಮ್ಮ ಬದುಕಿಗೆ ಆಸರೆಯಾಗಿವೆ ಎಂದು ಹೇಳುವಾಗ ಸರ್ಕಾರದ ಯೋಜನೆ ಸಾರ್ಥಕ ಎನಿಸುತ್ತದೆ. ಅಂತೆಯೇ ಪ್ರತಿ ಗ್ರಾಮದ ಎಲ್ಲ ಮನೆಗಳಿಗೂ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವ ಉದ್ದೇಶದಿಂದ ಜೆಜೆಎಂ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವುದರೊಂದಿಗೆ ಯಾವ ವ್ಯಕ್ತಿಯು ಈ ಯೋಜನೆಯಿಂದ ವಂಚಿತವಾಗಬಾರದು ಎಂಬುದು ನಮ್ಮ ಆದ್ಯತೆಯಾಗಿದೆ. ನೀರು ಅತ್ಯಮೂಲ್ಯವಾಗಿದ್ದು, ಬರಗಾಲದ ಈ ಸಂದರ್ಭದಲ್ಲಿ ಮಿತಬಳಕೆಯನ್ನು ಮಾಡಿ ಜೀವನ ಸಾಗಿಸುವ ಅನಿವಾರ್ಯತೆಯಿದೆ. ಮುಂದಿನ ದಿನಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪುಗೊಂಡಿದ್ದು, ಚಕ್ರಾ ಡ್ಯಾಂನಿಂದ ಹೊಸನಗರ ತಾಲೂಕಿನ ಪ್ರತಿ ಮನೆಗೂ ನೀರು ಸರಬರಾಜು ಮಾಡಲಾಗುತ್ತದೆ. 417 ಕೋಟಿ ರೂ. ಅನುದಾನ ಬಳಕೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ಈ ಭಾಗಗಳಲ್ಲಿ ಮುಳುಗಡೆ ಸಂತ್ರಸ್ತರಿದ್ದು, ಅನೇಕ ವರ್ಷಗಳಿಂದ ಸಂಕಷ್ಟ ಎದುರಿಸುತ್ತಿರುವುದು ಗಮನದಲ್ಲಿದೆ. ಒಂದು ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದ ಸಭೆಯನ್ನು ಆಯೋಜಿಸಿ ಕ್ರಮಕೈಗೊಳ್ಳಲಾಗುವುದು. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ನಿಮ್ಮೂರಿನ ರಸ್ತೆ, ಶಾಲೆ, ಕೆರೆ, ಕಾಲುಸಂಕ ಮುಂತಾದ ಮೂಲ ಅಗತ್ಯತೆಗಳನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ದೇವರಾಜ, ಸದಸ್ಯರಾದ ಉಮಾಕರ, ಲಕ್ಷ್ಮೀ, ಯೋಗೇಂದ್ರ, ಅರುಣ್‌ಕುಮಾರ್, ಉಮೇಶ, ಮುಖಂಡರಾದ ಬಿ.ಪಿ.ರಾಮಚಂದ್ರ, ಈಶ್ವರಪ್ಪಗೌಡ, ನಾಗಪ್ಪ ಇತರರಿದ್ದರು.