ಚೆನ್ನೈನಲ್ಲಿ ಸುರೇಶ್​ ರೈನಾ ಯಶಸ್ಸು ಪಡೆಯಲು ಮೊಸರನ್ನ, ರಸಮ್​​ ಕಾರಣ!

raina csk
Published on

ಚೆನ್ನೈ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಎಡಗೈ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಟೀಮ್​ ಇಂಡಿಯಾಗಿಂತ ಉತ್ತಮ ಯಶಸ್ಸನ್ನು ಐಪಿಎಲ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಪರ ಗಳಿಸಿದ್ದಾರೆ. ಚೆನ್ನೈನ ಬಿಸಿಲಿನ ತಾಪದ ನಡುವೆ ಆಡುವ ಸವಾಲಿನ ನಡುವೆಯೂ ಅವರು ರನ್​ಪ್ರವಾಹ ಹರಿಸುವುದಕ್ಕೆ ನೆರವಾಗಿರುವುದು ಮೊಸರನ್ನ ಮತ್ತು ರಸಮ್​ ಅಂತೆ! ಸಂದರ್ಶನವೊಂದರಲ್ಲಿ ರೈನಾ ಅವರೇ ಇದನ್ನು ಹೇಳಿಕೊಂಡಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕಠಿಣ ವಾತಾವರಣದ ನಡುವೆ ಆಡುವುದು ದೊಡ್ಡ ಸವಾಲು. ಉತ್ತರ ಪ್ರದೇಶ ಮೂಲದ ಆಟಗಾರರಾದ ರೈನಾಗೆ ತಮಿಳುನಾಡಿನ ಕರಾವಳಿಯ ಬಿಸಿಲು ಸಹಿಸಿಕೊಳ್ಳುವುದು ಇನ್ನಷ್ಟು ಕಠಿಣ ಸವಾಲು. ಆದರೆ 2013ರಲ್ಲಿ ಚೆನ್ನೈನಲ್ಲಿ ನಡೆದ ಕಿಂಗ್ಸ್ ಇಲೆವೆನ್​ ಪಂಜಾಬ್​ ವಿರುದ್ಧದ ಪಂದ್ಯವೊಂದರಲ್ಲಿ ರೈನಾ ಕೇವಲ 53 ಎಸೆತಗಳಲ್ಲಿ ಅಜೇಯ 100 ರನ್​ ಸಿಡಿಸಿ ಗಮನ ಸೆಳೆದಿದ್ದರು. ಸಂಜೆ 4 ಗಂಟೆಯಿಂದ ನಡೆದ ಆ ಪಂದ್ಯದಲ್ಲಿ ರೈನಾ, ಚೆನ್ನೈ ಬಿಸಿಲಿನ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದರು.

'ಆ ಇನಿಂಗ್ಸ್​ ಅನ್ನು ನಾನು ಇತ್ತೀಚೆಗೆ ಮತ್ತೊಮ್ಮೆ ನೋಡಿದೆ. ಆ ವೇಳೆ ಎಲ್ಲರೂ ಬಿಸಿಲಿನ ಬಗ್ಗೆ ಮಾತನಾಡುತ್ತಿದ್ದರು. ಆದರೆ ಎಂಎಸ್​ (ಧೋನಿ) ಬಗ್ಗೆ ನಿಮಗೆ ತಿಳಿದೇ ಇದೆ. ಅವರು ಅದರ ಬಗ್ಗೆ ಎಲ್ಲ ಮಾತನಾಡುವವರಲ್ಲ. ಕಠಿಣ ಪರಿಸ್ಥಿತಿ ಎದುರಾಗಲೆಲ್ಲ ನಾನು ಅದನ್ನು ಎದುರಿಸಲು ಸಿದ್ಧವಾಗುವ ಮೊದಲ ವ್ಯಕ್ತಿ. ಬಿಸಿಲು ಸಾಕಷ್ಟಿದ್ದರೂ, ನಾನು ಅದನ್ನು ತಲೆಯಲ್ಲಿಟ್ಟುಕೊಂಡಿರಲಿಲ್ಲ. ಕೇವಲ ರಸಮ್​ ಮತ್ತು ಮೊಸರನ್ನ ತಿಂದು ಪಂದ್ಯಕ್ಕೆ ಸಜ್ಜಾಗಿದ್ದೆ' ಎಂದು 33 ವರ್ಷದ ರೈನಾ , ಹರ್ಷ ಬೋಗ್ಲೆ ಅವರ ಜತೆಗಿನ ಆನ್​ಲೈನ್​ ಮಾತುಕತೆಯ ವೇಳೆ ಹೇಳಿದ್ದಾರೆ.

'ಅಲ್ಲಿನ ಆ ಪರಿಸ್ಥಿತಿಯಲ್ಲಿ ನಾವು ಮನೆಯಲ್ಲಿ (ಉತ್ತರ ಭಾರತ) ಯಾವಾಗಲೂ ತಿನ್ನುವ ಆಹಾರವನ್ನು ತಿನ್ನಲು ಸಾಧ್ಯವಿರಲಿಲ್ಲ. ಅದೆಲ್ಲವನ್ನೂ ನಾವು ಪ್ಲ್ಯಾನ್​ ಮಾಡಿದ್ದೆವು. ನನ್ನ ಆಹಾರಕ್ರಮದ ಬಗ್ಗೆ ಆಗಲೇ ಎಚ್ಚರಿಕೆ ವಹಿಸುತ್ತಿದ್ದೆ. ಅಂದು ನಾನು ರಸಮ್​ ಮತ್ತು ಮೊಸರನ್ನ ಮಾತ್ರ ತಿಂದುದರಿಂದ ಆ ಇನಿಂಗ್ಸ್ ಆಡುವುದು ಸಾಧ್ಯವಾಯಿತು' ಎಂದು ರೈನಾ ನಗುತ್ತ ಹೇಳಿದ್ದಾರೆ.

ಸಿಎಸ್​ಕೆ ನಾಯಕ ಎಂಎಸ್​ ಧೋನಿ ನಿವೃತ್ತಿ ಹೇಳಿದ ಕೆಲವೇ ನಿಮಿಷಗಳಲ್ಲಿ ರೈನಾ ಕೂಡ ವಿದಾಯ ಪ್ರಕಟಿಸಿದ್ದರು. ಸಿಎಸ್​ಕೆ ತಂಡದಲ್ಲಿ ಧೋನಿ 'ತಲ' ಎಂದು ಕರೆಸಿಕೊಂಡರೆ, ರೈನಾ 'ಚಿನ್ನ ತಲ' ಎಂಬ ಹೆಸರು ಹೊಂದಿದ್ದಾರೆ. ಧೋನಿ-ರೈನಾ ಅವರನ್ನು ಜನಪ್ರಿಯ ಹಿಂದಿ ಸಿನಿಮಾ 'ಶೋಲೆ'ಯ ಜಯ್​-ವೀರೂ ಪಾತ್ರಕ್ಕೂ ಹೋಲಿಸಲಾಗುತ್ತಿದೆ. ಅಭಿಮಾನಿಗಳ ಈ ಪ್ರೀತಿ ನಮ್ಮ ಭಾಗ್ಯ ಎಂದಿರುವ ರೈನಾ, ದಕ್ಷಿಣ ಭಾರತದ ಈ ಪ್ರೀತಿಗೆ ತಾನು ಚಿರಋಣಿ. ಅಭಿಮಾನಿಗಳಿಂದಲೇ ನಾವು ಇಷ್ಟು ಸಮಯ ಕ್ರಿಕೆಟ್​ ಆಡಲು ಸಾಧ್ಯವಾಗಿರುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net