

ನವದೆಹಲಿ: ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಸಹ ಅತಿಥ್ಯ ವಹಿಸಿಕೊಂಡಿದ್ದ ಟಿ20 ವಿಶ್ವಕಪ್ 2024ರ ಟೂರ್ನಿ ಇತ್ತೀಚೆಗಷ್ಟೇ ಬಾರ್ಬಡೋಸ್ನಲ್ಲಿ ಅಂತ್ಯಗೊಂಡಿದ್ದು, ಟೀಮ್ ಇಂಡಿಯಾದ ಗೆಲುವಿನ ಮೂಲಕ ಯಶಸ್ವಿ ಮುಕ್ತಾಯ ಪಡೆಯಿತು. ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವರ್ಲ್ಡ್ಕಪ್ ಟ್ರೋಫಿಯನ್ನು ತಂದುಕೊಟ್ಟಿದ್ದು ಮರೆಯಲಾಗದ ಕ್ಷಣ. ರೋಹಿತ್ ಶರ್ಮ ನೇತೃತ್ವದ ಭಾರತ ತಂಡದ ಗೆಲುವಿಗೆ ಆಟಗಾರರ ಶ್ರಮ ಎಷ್ಟಿತ್ತೋ ಅಷ್ಟೇ ಶ್ರಮ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರದ್ದು ಇತ್ತು. ಈ ಟೂರ್ನಿ ಮೂಲಕ ತಮ್ಮ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ ದ್ರಾವಿಡ್, ದೇಶವ್ಯಾಪಿ ಅಭಿನಂದನೆಗಳ ಸುರಿಮಳೆಯ ಜತೆ ಭಾವುಕ ವಿದಾಯ ಪಡೆದರು.
ಟಿ20 ವಿಶ್ವಕಪ್ 2024ರ ಟೂರ್ನಿಯೇ ಅಂತಿಮ ಎಂದು ಮುಂಚಿತವಾಗಿಯೇ ತಮ್ಮ ಹೆಡ್ ಕೋಚ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಾಹುಲ್ ದ್ರಾವಿಡ್, ಎಲ್ಲರ ನಿರೀಕ್ಷೆಯಂತೆ ಟೀಮ್ ಇಂಡಿಯಾಗೆ ವಿಶ್ವಕಪ್ ಟ್ರೋಫಿ ತಂದುಕೊಡುವ ಮೂಲಕ ಹ್ಯಾಪಿ ಎಂಡಿಂಗ್ ಪಡೆದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬಹಳ ಸಂತೋಷ ಉಂಟಾಯಿತು. ದ್ರಾವಿಡ್ ನಿವೃತ್ತಿಯನ್ನು ನೆನೆದು ಕೆಲವರು ಭಾವುಕರಾದರೆ, ಇನ್ನೂ ಕೆಲವರು ಇಂತಹ ಐತಿಹಾಸಿಕ ಗೆಲುವಿಗೆ ಕಾರಣರಾದ ನಿಮಗೆ ಧನ್ಯವಾದ ಎಂದು ತಿಳಿಸಿದರು. ಸದ್ಯ ಇದೆಲ್ಲದರ ಮಧ್ಯೆ ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಮುಂಬರುವ ಐಪಿಎಲ್ಗೆ ರಾಹುಲ್ ಅವರೇ ನಮಗೆ ಕೋಚ್ ಆಗಬೇಕು ಎಂದು ಹೆಸರಾಂತ ಫ್ರಾಂಚೈಸಿಯೊಂದು ಮನವಿ ಮಾಡಿದೆ.
2025ರ ಐಪಿಎಲ್ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹೆಡ್ ಕೋಚ್ ಆಗಿ ಬರಬೇಕು ಎಂದು ಆರ್ಆರ್ ಫ್ರಾಂಚೈಸಿ ಮನವಿ ಮಾಡಿರುವುದಾಗಿ ವರದಿಯಾಗಿದೆ. ಆದ್ರೆ, ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಕೂಡ ಘೋಷಣೆಯಾಗಿಲ್ಲ. ಈ ಕುರಿತಂತೆ ರಾಜಸ್ಥಾನ ತಂಡವು ರಾಹುಲ್ ಅವರೊಂದಿಗೆ ಚರ್ಚೆ ನಡೆಸುತ್ತಿದೆ ಎಂದು ವರದಿ ಉಲ್ಲೇಖಿಸಿದೆ. ಅಸಲಿಗೆ ದ್ರಾವಿಡ್ ಕೋಚ್ ಆಫರ್ ಸ್ವೀಕರಿಸಲಿದ್ದಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).