ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ದರ್ಶನ್ ನಂಬಿ ಬಂಡವಾಳ ಹೂಡಿರುವ ನಿರ್ಮಾಪಕರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ಅಂದುಕೊಂಡಂತೆ ನಡೆದಿದ್ದರೆ ಇನ್ನು ಕೆಲವೇ ತಿಂಗಳಲ್ಲಿ ಡೆವಿಲ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ಈಗಾಗಲೇ ಈ ಚಿತ್ರದ ಮುಕ್ಕಾಲು ಭಾಗದ ಶೂಟಿಂಗ್ ಕಂಪ್ಲೀಟ್ ಆಗಿತ್ತು. ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗಲೇ ನಟ ದರ್ಶನ್ರನ್ನು ಪೊಲೀಸರು ಬಂಧಿಸಿದ್ದರು. ದರ್ಶನ್ ಬಂಧನದಿಂದ ಡೆವಿಲ್ ಚಿತ್ರದ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡೆವಿಲ್ ಚಿತ್ರದ ನಿರ್ಮಾಪಕರು ಮಾತ್ರವಲ್ಲದೆ, ಕೆವಿನ್ ಪ್ರೊಡಕ್ಷನ್ ಹಾಗೂ ರಾಘವೇಂದ್ರ ಹೆಗಡೆ ಕೂಡ ಹಣ ಕೊಟ್ಟು ಚಿಂತಿಸುತ್ತಿದ್ದಾರೆ. ದರ್ಶನ್ಗೆ ಮುಂಗಡ ಹಣ ಕೊಟ್ಟು ಮತ್ತಷ್ಟು ನಿರ್ಮಾಪಕರು ಕಂಗಾಲಾಗಿದ್ದಾರೆ. ಕನ್ನಡದ ಸೂರಪ್ಪ ಬಾಬು, ತಮಿಳಿನ ರಮೇಶ್ ಪಿ ಪಿಳ್ಲೈ, ತೆಲುಗಿನ ಪ್ರಸಾದ್, ದರ್ಶನ್ಗೆ ಕೋಟಿ ಕೋಟಿ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ನಂತರ ನಿರ್ಮಾಪಕ ಸೂರಪ್ಪ ಬಾಬು ದರ್ಶನ್ ಜತೆ ಸಿನಿಮಾ ಅನೌನ್ಸ್ ಮಾಡಿದ್ದರು. ಈಗಾಗಲೇ ಈ ಚಿತ್ರಕ್ಕೆ ಸೂರಪ್ಪ ಬಾಬು ಎರಡು ಕೋಟಿ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಕಳೆದ ವರ್ಷ ತಮಿಳಿನ ಖ್ಯಾತ ನಿರ್ಮಾಪಕ ರಮೇಶ್ ಪಿ ಪಿಳ್ಳೈ ಒಂದು ಕೋಟಿ ಅಡ್ವಾನ್ಸ್ ನೀಡಿದ್ದರು. ಡೆವಿಲ್ ಚಿತ್ರದ ಹೈದ್ರಾಬಾದ್ ಶೆಡ್ಯೂಲ್ ವೇಳೆ ಕತೆ ಹೇಳಿಸುವಂತೆ ದರ್ಶನ್ ಹೇಳಿದ್ದರು. ಅಷ್ಟರಲ್ಲಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ.
ಇದಲ್ಲದೆ ಎರಡು ವರ್ಷಗಳ ಹಿಂದೆ ದರ್ಶನ್ಗೆ ಹೈದರಾಬಾದ್ ಮೂಲದ ಪ್ರಸಾದ್ ಎಂಬುವರು ಒಂದು ಕೋಟಿ ಅಡ್ವಾನ್ಸ್ ಮಾಡಿದ್ದಾರೆ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಆತಂಕಕ್ಕೀಡಾಗಿದ್ದಾರೆ. ದರ್ಶನ್ ಯಾವಗ ಜೈಲಿನಿಂದ ಬರ್ತಾರೆ? ಯಾವಾಗ ಸಿನಿಮಾ ಮಾಡಿಕೊಡುತ್ತಾರೆ? ಎಂಬ ಆತಂಕ ಮನೆ ಮಾಡಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೊಲೆಯಾದ ರೇಣುಕಾಸ್ವಾಮಿ, ಆರೋಪಿ ಪವಿತ್ರಾ ಗೌಡ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಆರೋಪವಿದೆ. ಹೀಗಾಗಿ ಆತನ ಇನ್ಸ್ಟಾಗ್ರಾಂ ಖಾತೆ ಮತ್ತು ವಾಟ್ಸ್ಆ್ಯಪ್ ಖಾತೆಯ ಡೇಟಾವನ್ನು ಮರಳಿ ಪಡೆಯುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಪಟ್ಟಣಗೆರೆ ಶೆಡ್ ಸುತ್ತಮುತ್ತಲಿಗೆ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಬರ್ ತಜ್ಞರು ಪರಿಶೀಲಿಸಿ ದತ್ತಾಂಶವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಈ ಪ್ರಕರಣ ಸಂಬಂಧ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಜುಲೈ 18ರಂದು ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಯಲ್ಲಿ ದರ್ಶನ್ ಮತ್ತು ಇನ್ನಿತರ ಆರೋಪಿಗಳನ್ನು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಮತ್ತೊಮ್ಮೆ 14 ದಿನಗಳ ಕಾಲ ಅಂದರೆ ಆಗಸ್ಟ್ 1ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. ಇನ್ನೊಂದೆಡೆ ನಟ ದರ್ಶನ್ ಮನೆಯೂಟಕ್ಕೆ ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿ ಎಂದಿರುವ ನ್ಯಾಯಾಲಯ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಆ ಒಂದು ಕಾರಣಕ್ಕೆ ನಾನು ಸಿನಿಮಾಗಳಲ್ಲಿ ಅರ್ಧಂಬರ್ಧ ಬಟ್ಟೆ ತೊಡುವುದಿಲ್ಲ ಎಂದ ನಟಿ ಐಶ್ವರ್ಯಾ ರಾಜೇಶ್!
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಬಂಧನ: ಕೊನೆಗೂ ಮೌನ ಮುರಿದ ಧ್ರುವ ಸರ್ಜಾ!