

ಬೆಂಗಳೂರು: ಈ ಬಾರಿಯ ಪ್ರೋ ಕಬಡ್ಡಿ ಲೀಗ್ ಉದ್ಘಾಟನೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದೆ. ಇಂದು (ಅ.7) ರಾತ್ರಿ ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 9ನೇ ಆವೃತ್ತಿಯ ಕಬಡ್ಡಿ ಲೀಗ್ಗೆ ಚಾಲನೆ ದೊರೆಯಲಿದೆ. ಕರೊನಾದಿಂದಾಗಿ 2 ವರ್ಷ ಪ್ರೇಕ್ಷಕರಿಲ್ಲದೆ ಕಬಡ್ಡಿ ಲೀಗ್ ಕಳೆಗುಂದಿತ್ತು. ಆದರೆ, ಈ ಬಾರಿ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ್ದು, ಹೊಸ ಹುರುಪಿನೊಂದಿಗೆ ಕಬಡ್ಡಿ ತಂಡಗಳು ಕಾದಾಡಲು ಭಾರಿ ತಯಾರಿ ನಡೆಸಿವೆ.
ಈ ಬಾರಿ ಮೂರು ಹಂತಗಳಲ್ಲಿ ಮೂರು ಕಡೆ ಲೀಗ್ ಆಯೋಜನೆ ಮಾಡಲಾಗಿದೆ. ಬೆಂಗಳೂರು, ಪುಣೆ ಮತ್ತು ಹೈದರಾಬಾದ್ನಲ್ಲಿ ಲೀಗ್ ನಡೆಯಲಿದೆ. ಅ.7ರಿಂದ ಅ. 26ರವರೆಗೆ ಮೊದಲ ಹಂತದ ಪಂದ್ಯಗಳು ಬೆಂಗಳೂರಿನ ನಡೆಯಲಿವೆ. ಎರಡನೇ ಹಂತದ ಪಂದ್ಯಗಳು ಅ.28ರಿಂದ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿವೆ. ಕೊನೆಯ ಹಂತದ ಪಂದ್ಯಗಳು ಹೈದರಾಬಾದ್ನಲ್ಲಿ ನಡೆಯಲಿವೆ. ಒಟ್ಟು 66 ಪಂದ್ಯಗಳು ನಡೆಯಲಿದೆ ಎಂದು ವಿವೋ ಪ್ರೊ ಕಬಡ್ಡಿ ಲೀಗ್‌ನ ಆಯೋಜಕ ಮಶಾಲ್ ಸ್ಪೋರ್ಟ್ಸ್ ಘೋಷಿಸಿದೆ.
ಲೀಗ್ ಆರಂಭಕ್ಕೂ ಮುನ್ನ 12 ತಂಡಗಳ ನಾಯಕರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ತಮ್ಮ ತಂಡ ಹಾಗೂ ಸಹ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ, ಯಾರ್ಯಾರು? ಏನು ಹೇಳಿದ್ದಾರೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ....
1. ಮನಿಂದರ್ ಸಿಂಗ್ (ಬೆಂಗಾಲ್ ವಾರಿಯರ್ಸ್)
ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಭಾಸ್ಕರನ್ ಕಾಶಿನಾಥನ್ ಅವರನ್ನು ನೂತನ ಮುಖ್ಯ ತರಬೇತುದಾರರನ್ನಾಗಿ ಆಯ್ಕೆ ಮಾಡಲಾಗಿದ್ದು, ಈ ಬಗ್ಗೆ ಮಾತನಾಡಿದ ನಾಯಕ ಮನಿಂದರ್ ಸಿಂಗ್, ಸೀಸನ್ ಒಂದರಲ್ಲಿ ಅವರ ನೇತೃತ್ವದ ಅಡಿಯಲ್ಲಿ ಗೆದ್ದಿದ್ದೇನೆ. ಅವರೊಬ್ಬ ಉನ್ನತ ದರ್ಜೆಯ ತರಬೇತುದಾರ. ಅವರ ತರಬೇತಿ ಅಡಿಯಲ್ಲಿ ಟ್ರೋಫಿ ಗೆಲ್ಲುವ ಗುರಿಯಿದೆ. ಇದೀಗ ದೀಪಕ್ ಹೂಡಾ ಕೂಡ ನಮ್ಮ ಜೊತೆ ಸೇರಿದ್ದು, ರೈಡಿಂಗ್ಗೆ ಇನ್ನಷ್ಟು ಬಲ ಬಂದಿದೆ. ನಮ್ಮ ತಂಡದಲ್ಲಿ ಆತ್ಮವಿಶ್ವಾಸ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
2. ಮಹೇಂದರ್ ಸಿಂಗ್ (ಬೆಂಗಳೂರು ಬುಲ್ಸ್)
ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ವಿಕಾಶ್ ಕೊಂಡೊಲಾ ಅವರ ಬಗ್ಗೆ ಮಾತನಾಡಿದ ಮಹೇಂದರ್ ಸಿಂಗ್, ನಾನು ವಿಕಾಶ್ ಅವರಲ್ಲಿ ನಂಬಿಕೆ ಇಟ್ಟಿದ್ದೇನೆ. ಅವರೊಬ್ಬ ಅತ್ಯುತ್ತಮ ಆಟಗಾರ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ನಮ್ಮ ಗೆಲುವಿಗೆ ಅವರು ನೆರವು ನೀಡಲಿದ್ದಾರೆ ಎಂದರು.
3. ನವೀನ್ ಕುಮಾರ್ (ದಬಾಂಗ್ ದೆಹಲಿ)
ನಾಯಕತ್ವ ಮತ್ತು ಹಾಲಿ ಚಾಂಪಿಯನ್ ಎಂಬ ಟ್ಯಾಗ್‌ಗಳು ಒತ್ತಡ ಉಂಟು ಮಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನವೀನ್, ನಾಯಕತ್ವದ ಹೆಚ್ಚುವರಿ ಜವಾಬ್ದಾರಿಯೊಂದಿಗೆ, ನಾನು ಸುಧಾರಿಸುತ್ತೇನೆ ಎಂದು ಭಾವಿಸುತ್ತೇನೆ. ಸರಿಯಾದ ಮಾರ್ಗದಲ್ಲಿ ತಂಡವನ್ನು ಮುನ್ನಡೆಸಲು ಬಯಸುತ್ತೇನೆ ಎಂದರು.
4. ಚಂದ್ರನ್ ರಂಜಿತ್ (ಗುಜರಾತ್ ಜೈಂಟ್ಸ್)
ಗುಜರಾತ್ ತಂಡದ ನಾಯಕ ಚಂದ್ರನ್ ಮಾತನಾಡಿ, ನಾವು ಅನೇಕ ಹೊಸ ಆಟಗಾರರನ್ನು ನಮ್ಮ ತಂಡದಲ್ಲಿ ಹೊಂದಿದ್ದೇವೆ. ಕೆಲವರು ಅನುಭವಿಗಳು ಕೂಡ ಹೌದು. ನಾವು ಒಳ್ಳೆಯ ಆಟವಾಡಲಿದ್ದೇವೆ ಮತ್ತು ಒಳ್ಳೆಯ ಫಲಿತಾಂಶದ ಗುರಿ ಹೊಂದಿದ್ದೇವೆ ಎಂದು ಹೇಳಿದರು.
5. ಜೋಗಿಂದರ್ ನರ್ವಾಲ್ (ಹರಿಯಾಣ ಸ್ಟೀಲರ್ಸ್)
ತಂಡದ ಸಂಯೋಜನೆ ಬಗ್ಗೆ ಮಾತನಾಡಿದ ಜೋಗಿಂದರ್, ಹಿರಿಯ ಆಟಗಾರರಷ್ಟೇ ಯುವ ಆಟಗಾರರು ಸಹ ತುಂಬಾ ಮುಖ್ಯ. ಈ ಎರಡರ ಉತ್ತಮ ಮಿಶ್ರಣ ನಮ್ಮ ತಂಡದಲ್ಲಿದೆ. ಯುವ ಆಟಗಾರರ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ ಮತ್ತು ನಮಗೆ ಒಳ್ಳೆಯದ್ದನ್ನು ಮಾಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
6. ಸುನೀಲ್ ಕುಮಾರ್ (ಜೈಪುರ್ ಪಿಂಕ್ ಪ್ಯಾಂಥರ್ಸ್)
ಪಿಂಕ್ ಪ್ಯಾಂಥರ್ಸ್ ತಂಡದ ತರಬೇತಿ ಹಾಗೂ ತಯಾರಿಯ ಬಗ್ಗೆ ಮಾತನಾಡಿದ ಸುನೀಲ್, ನಾವು ಒಂದು ತಿಂಗಳ ತರಬೇತಿ ಶಿಬಿರದಿಂದ ಹೊಸ ಹುರುಪಿನಲ್ಲಿ ಬರುತ್ತಿದ್ದೇವೆ. ನಾವು ಬಲವಾದ ಬಂಧವನ್ನು ರಚಿಸಿದ್ದೇವೆ ಮತ್ತು ಒಳ್ಳೆಯ ಉದ್ದೇಶದಿಂದ ಅಭ್ಯಾಸ ಮಾಡಿದ್ದೇವೆ. ನಮ್ಮ ತಂಡದ ರಾಹುಲ್ ಚೌಧರಿ ಅವರು ಒಳ್ಳೆಯ ಫಾರ್ಮ್‌ಗೆ ಬಂದಿರುವುದು ಖುಷಿಯ ಸಂಗತಿ ಎಂದರು.
7. ನೀರಜ್ ಕುಮಾರ್ (ಪಟನಾ ಪೈರೆಟ್ಸ್)
ಕಳೆದ ವರ್ಷದ ಫೈನಲ್ ಪಂದ್ಯದಲ್ಲಿ ಒಂದು ಅಂಕದಿಂದ ಸೋತಿದ್ದನ್ನು ನೆನಪು ಮಾಡಿಕೊಂಡ ನೀರಜ್, ನಾವು ಫೈನಲ್ನಲ್ಲಿ ಕೆಲವು ಎಡವಟ್ಟುಗಳನ್ನು ಮಾಡಿದೆವು. ಸದ್ಯ ಆ ತಪ್ಪುಗಳು ಮರುಕಳಿಸುವುದಿಲ್ಲ. ನಮ್ಮ ತಂಡವು ಬಹುಮಟ್ಟಿಗೆ ಹಿಂದಿನ ತಂಡವನ್ನೇ ಹೋಲುತ್ತದೆ ಮತ್ತು ನಾವು ಕೆಲವು ಹೊಸ ರೈಡರ್‌ಗಳನ್ನು ಹೊಂದಿದ್ದೇವೆ. ದೋಷಗಳನ್ನು ಸರಿಪಡಿಸಲು ನಾವು ಈ ಬಾರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
8. ಅಸ್ಲಾಂ ಇನಾಮ್ದಾರ್ (ಪುಣೇರಿ ಪಲ್ಟಾನ್)
ತಂಡದ ಸಾಮಾನ್ಯ ಸಿದ್ಧತೆಗಳು ಮತ್ತು ತಮ್ಮ ಹೊಸ ಕೌಶಲ್ಯಗಳ ಬಗ್ಗೆ ಮಾತನಾಡಿದ ಅಸ್ಲಾಂ, ಲೀಗ್ನಲ್ಲಿ ಪ್ರದರ್ಶನ ನೀಡಲು ನಮ್ಮ ತಂಡವು ತುಂಬಾ ಉತ್ಸುಕವಾಗಿದೆ. ನಾವು ಒಳ್ಳೆಯ ತಂಡವನ್ನು ಹೊಂದಿದ್ದು, ಚಾಂಪಿಯನ್ ಆಗಲು ಪ್ರಯತ್ನಿಸುತ್ತೇವೆ. ಇನ್ನೂ ನನ್ನ ಹೊಸ ಕೌಶಲ್ಯಗಳ ಬಗ್ಗೆ ಹೇಳುವುದಕ್ಕಿಂತ ನೀವು ಕಾದು ನೋಡಬೇಕು ಎಂದರು.
9. ಪವನ್ ಸೆಹ್ರಾವತ್ (ತಮಿಳು ತಲೈವಾಸ್)
ಅತಿ ದುಬಾರಿ ಆಟಗಾರನೆಂಬ ಹೆಸರು ಹೊಂದಿರುವ ಪವನ್ ಮಾತನಾಡಿ, ದುಬಾರಿ ಆಟಗಾರನೆಂಬ ಹೆಮ್ಮೆ ಇದೆ. ಆದರೆ, ಒತ್ತಡ ಇಲ್ಲ. ನಾನು ಸ್ಪಷ್ಟ ಮನಸ್ಸಿನಿಂದ ಲೀಗ್ನಲ್ಲಿ ಭಾಗಿಯಾಗುತ್ತೇನೆ ಮತ್ತು ಅತ್ಯುತ್ತಮವಾದದ್ದನ್ನು ನೀಡಲು ಎದುರು ನೋಡುತ್ತೇನೆ ಎಂದು ಹೇಳಿದರು.
10. ರವಿಂದರ್ ಪಹಾಲ್ (ತೆಲುಗು ಟೈಟಾನ್ಸ್)
ಈ ಸೀಸನ್ನ ಗುರಿಯ ಬಗ್ಗೆ ಮಾತನಾಡಿದ ರವೀಂದರ್, ಎಲ್ಲ ಪೊಸಿಸನ್ನಲ್ಲೂ ಒಳ್ಳೆಯ ಅರಿವು ಇರುವ ಸಮತೋಲಿತ ತಂಡವನ್ನು ಹೊಂದಿದ್ದೇವೆ. ನಾನು ಫೈನಲ್ ಮೇಲೆ ನನ್ನ ದೃಷ್ಟಿ ನೆಡುತ್ತೇನೆ ಎಂದಿದ್ದಾರೆ.
11. ಸುರಿಂದರ್ ಸಿಂಗ್ (ಯು ಮುಂಬಾ)
ಹೊಸ ರೂಪದ ಯು ಮುಂಬಾ ತಂಡಕ್ಕೆ ಹಿಂತಿರುಗಿ ಮತ್ತು ನಾಯಕತ್ವ ವಹಿಸಿಕೊಂಡಿರುವ ಸುರಿಂದರ್ ಮಾತನಾಡಿ, ಈ ಲೀಗ್ ತುಂಬಾ ದೀರ್ಘವಾಗಿದೆ ಮತ್ತು ಪಂದ್ಯದಿಂದ ಪಂದ್ಯಕ್ಕೆ ಹೊಂದಿಕೆಯಾಗುವ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ. ನಮ್ಮ ತಂಡ ಯುವ ರೈಡರ್ಸ್ ಮತ್ತು ಡಿಫೆಂಡರ್ಸ್ಗಳನ್ನು ಹೊಂದಿದೆ. ಪಂದ್ಯಗಳಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ತೋರಿಸುತ್ತೇವೆ ಎಂದರು.
12. ನಿತೀಶ್ ಕುಮಾರ್ (ಯು.ಪಿ.ಯೋಧ)
ತಮ್ಮ ತಂಡದ ಆಟಗಾರ ಪರ್ದೀಪ್ ಮೇಲಿನ ನಿರೀಕ್ಷೆಗಳ ಬಗ್ಗೆ ಮಾತನಾಡಿದ ನಾಯಕ ನಿತೀಶ್, ಈ ಸೀಸನ್ನಲ್ಲಿ ಪರ್ದೀಪ್ ಫಿಟ್ ಮತ್ತು ಫೈರಿಂಗ್ ಆಗಿದ್ದಾರೆ. ಅವರು ಪ್ರಮುಖ ರೈಡರ್ ಆಗಿ ನಮ್ಮ ತಂಡದ ಸಂಯೋಜನೆಗೆ ಸಹಾಯ ಮಾಡುತ್ತಾರೆ ಎಂದರು.
ಇಂದು ಆರಂಭವಾಗುವ ಲೀಗ್‌ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಹಾಗೂ ಸೀಸನ್ 2ರ ವಿಜೇತ ತಂಡ ಯು ಮುಂಬಾ ಸೆಣಸಾಡಲಿವೆ. ಮೊದಲ ದಿನದ ಎರಡನೇ ಪಂದ್ಯ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ನಡೆಯಲಿದೆ. ಮೂರನೇ ಪಂದ್ಯ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಯುಪಿ ಯೋಧಾಸ್ ನಡುವೆ ನಡೆಯಲಿದೆ. (ಏಜೆನ್ಸೀಸ್)