

ಮುಂಬೈ (ಮಹಾರಾಷ್ಟ್ರ): ಮುಂಬೈ ಉಪನಗರ ರೈಲಿನ ಮಹಿಳಾ ಮೀಸಲು ಬೋಗಿಯು ನಿನ್ನೆ (ಅ.6) ಜಡೆ ಜಗಳಕ್ಕೆ ಸಾಕ್ಷಿಯಾಯಿತು. ಚಲಿಸುವ ರೈಲಿನಲ್ಲೇ ಮಹಿಳಾಮಣಿಗಳು ಕಿತ್ತಾಡಿಕೊಂಡರು. ಈ ವೇಳೆ ಕರ್ತವ್ಯದಲ್ಲಿದ್ದ ಓರ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡರು.
ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥಾಣೆ-ಪನ್ವೆಲ್ ಸ್ಥಳೀಯ ರೈಲಿನ ಮಹಿಳಾ ಬೋಗಿಯಲ್ಲಿ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ.
ಈ ಬಗ್ಗೆ ವಾಶಿ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಸಂಭಾಜಿ ಕಾಟರೆ ಮಾತನಾಡಿದ್ದು, ತುರ್ಭೆ ನಿಲ್ದಾಣ ಸಮೀಪ ಸೀಟಿಗಾಗಿ ಮೂವರು ಮಹಿಳೆಯರ ನಡುವೆ ಆರಂಭವಾದ ಮಾತಿನ ಚಕಮಕಿ ತಾರಕಕ್ಕೇರಿ ಜಗಳ ನಡೆಯಿತು. ಈ ವೇಳೆ ಮತ್ತಷ್ಟು ಮಹಿಳೆಯರು ತಮ್ಮವರಿಗೆ ಬೆಂಬಲಿಸಲು ಹೋಗಿ ಜಗಳವನ್ನು ದೊಡ್ಡದು ಮಾಡಿದರು ಎಂದು ಮಾಹಿತಿ ನೀಡಿದರು.
ಗಲಾಟೆ ಸಮಯದಲ್ಲಿ ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದರು. ಆದರೆ, ಕೆಲ ಮಹಿಳೆಯರು ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿದ್ದು, ಪರಿಣಾಮ ಅವರು ಗಾಯಗೊಂಡರು. ಅಲ್ಲದೆ, ಮೂವರು ಮಹಿಳೆಯರಿಗೂ ಗಾಯಗಳಾಗಿವೆ. ಓರ್ವ ಮಹಿಳೆಯ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಯಿತು.
ಪೊಲೀಸರ ಪ್ರಕಾರ, ತುರ್ಭೆ ನಿಲ್ದಾಣದಲ್ಲಿ ಸೀಟು ಖಾಲಿಯಾದಾಗ ಓರ್ವ ಮಹಿಳಾ ಪ್ರಯಾಣಿಕರು ಎರಡನೇ ಮಹಿಳೆಗೆ ಸೀಟಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲು ಪ್ರಯತ್ನಿಸಿದರು. ಆದರೆ, ಮೂರನೇ ಮಹಿಳೆ ಕೂಡ ಅದೇ ಸೀಟಿನಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಮೂವರು ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್ಪೆಕ್ಟರ್ ಸಂಭಾಜಿ ಕಾಟರೆ ತಿಳಿಸಿದರು. (ಏಜೆನ್ಸೀಸ್)