More

    ಸದ್ದಿಲ್ಲದೆ ಏರಿದ ಮನೆ ಕಂದಾಯ; ಗ್ರಾಮೀಣರಿಗೆ ಹೊರೆಯಾದ ತೆರಿಗೆ ಸೂತ್ರ, ಪಂಚತಂತ್ರ ಸಾಫ್ಟ್​ವೇರ್​ನಲ್ಲೂ ಅವ್ಯವಸ್ಥೆ


    ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು/ನವೀನ್ ಬಿಲ್ಗುಣಿ, ಶಿವಮೊಗ್ಗ

    ಗ್ರಾಮೀಣ ಪ್ರದೇಶದಲ್ಲಿ ಮನೆ ಕಂದಾಯಕ್ಕೆ ಸರ್ಕಾರ ರೂಪಿಸಿರುವ ಹೊಸ ಸೂತ್ರ ಜನರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ. ನೂರಾರು ರೂಪಾಯಿ ಪಾವತಿಸುತ್ತಿದ್ದವರು ಈಗ ಸಾವಿರಾರು ರೂಪಾಯಿ ತೆರಬೇಕಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಅನ್ವಯಿಸದ ಹಲವು ಉಪಕರಗಳನ್ನು ಜೋಡಿಸಿ ಕಂದಾಯ ನಿಗದಿಪಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಹಿಂದೆ ಹೇಗಿತ್ತು?

    ಈ ಮೊದಲು ಗ್ರಾಮಸಭೆಗಳಲ್ಲಿ ಹಳ್ಳಿಗಳ ಸ್ಥಿತಿಗತಿಗಳನ್ನು ಆಧರಿಸಿ ತೆರಿಗೆ ನಿಗದಿ ಮಾಡಲಾಗುತ್ತಿತ್ತು. ಅಂದರೆ ಖಾಲಿ ನಿವೇಶನ ಮತ್ತು ಮನೆಯಿಂದ ಬರುವ ಆದಾಯದ ಮೇಲೆ ಅಂದಾಜು 300 ರೂ.ನಿಂದ 1 ಸಾವಿರ ರೂ. ತೆರಿಗೆ ವಿಧಿಸಲಾಗುತ್ತಿತ್ತು. ಈ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ಅಧಿಕಾರ ಹೊಂದಿದ್ದರು.

    ಆದರೆ, ಇದೀಗ ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸ್ಥಿರಾಸ್ತಿಯ ಮಾರ್ಗಸೂಚಿ ದರ (ಎಸ್​ಆರ್ ವ್ಯಾಲ್ಯೂ) ಆಧರಿಸಿ ಮತ್ತು ಬಂಡವಾಳದ ಮೇಲೆ ತೆರಿಗೆ ನಿಗದಿ ಮಾಡಲಾಗುತ್ತಿದೆ. ಇದರಿಂದಾಗಿ ಕಂದಾಯ 1 ರಿಂದ 3 ಸಾವಿರ ರೂ. ವರೆಗೂ ಹೆಚ್ಚಳ ವಾಗಿದೆ. ಕೆಲವೆಡೆ, ಶೇ.100 ತೆರಿಗೆ ಹೆಚ್ಚಾಗಿದೆ.

    ಸಾಮಾನ್ಯವಾಗಿ ನೋಂದಣಿ , ಮುದ್ರಾಂಕ ಇಲಾಖೆಯು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸ್ಥಿರಾಸ್ತಿ ನೋಂದಣಿ ಸಮಯದಲ್ಲಿ ಮಾರಾಟಗಾರ ಮತ್ತು ಖರೀದಿದಾರನ ನಡುವೆ ಆಗುವ ವಹಿವಾಟು ಮೌಲ್ಯದ ಮೇಲೆ ಮಾರ್ಗಸೂಚಿ ದರ ನಿಗದಿ ಮಾಡಿರುತ್ತದೆ. ನೋಂದಣಿ ಶುಲ್ಕ ಹೆಚ್ಚು ಸಂಗ್ರಹಿಸುವುದು ಉದ್ದೇಶವಾಗಿರುತ್ತದೆ. ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ಗ್ರಾಮಗಳಿಗೆ ನೇರ ಪ್ರಯೋಜನ ಇರುವುದಿಲ್ಲ. ಮಾರ್ಗಸೂಚಿ ದರ ಮತ್ತು ಬಂಡವಾಳದ ಮೇಲೆ ಗ್ರಾಮ ಪಂಚಾಯಿತಿಗಳು ಮನೆ ಕಂದಾಯ ತೆರಿಗೆ ವಸೂಲಿ ಮಾಡುವಂತಾಗಿದೆ. ಪಿತ್ರಾರ್ಜಿತ ಆಸ್ತಿ ಮತ್ತು ಗ್ರಾಮಗಳಿಗೆ ಮೂಲಸೌಕರ್ಯ ಇಲ್ಲದಿದ್ದರೂ ಮಾರ್ಗಸೂಚಿ ದರದ ಕಾರಣಕ್ಕೆ ದುಪ್ಪಟ್ಟು ತೆರಿಗೆ ಪಾವತಿ ಮಾಡಬೇಕಾಗಿದೆ. ಮತ್ತೊಂದೆಡೆ, ಪಂಚತಂತ್ರ 2.0 ತಂತ್ರಾಂಶಕ್ಕೆ ಅಪ್​ಡೇಟ್ ಮಾಡುವ ಉದ್ದೇಶಕ್ಕೆ ಗ್ರಾಪಂ ಅಧಿಕಾರಿಗಳ ಮೇಲೆ ತೆರಿಗೆ ವಸೂಲಿ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒತ್ತಡ ಹೇರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

    ತೆರಿಗೆ ನಿರ್ಧಾರ ಹೇಗೆ?

    ಆಯಾ ಪ್ರದೇಶದ ಸ್ಥಿರಾಸ್ತಿ ಮೌಲ್ಯ ಹಾಗೂ ಆಸ್ತಿಯ ಮೇಲಿನ ಬಂಡವಾಳ ಹೂಡಿಕೆ ಮೇಲೆ ತೆರಿಗೆ ನಿಗದಿ ಮಾಡಲಾಗುತ್ತಿದೆ.

    ವೈಜ್ಞಾನಿಕ ತೆರಿಗೆ ವಿಧಾನ ಅಳವಡಿಕೆ

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹುಬ್ಬಳ್ಳಿ- ಧಾರವಾಡ, ಮಂಗಳೂರು, ಶಿವಮೊಗ್ಗ ನಗರ, ಮೈಸೂರು ಸೇರಿದಂತೆ ನಗರ ಪ್ರದೇಶದ ಸಮೀಪದಲ್ಲಿ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಹಳ್ಳಿಗಳಿಗೆ ತೆರಿಗೆ ದುಪ್ಪಟ್ಟು ಆಗಿವೆ. ಉಳಿದಂತೆ ನಗರ ಪ್ರದೇಶದಿಂದ ದೂರ ಇದ್ದು, ಮಾರ್ಗಸೂಚಿ ದರ ಕಡಿಮೆ ಇರುವ ಪ್ರದೇಶದಲ್ಲಿ ತೆರಿಗೆ ಅಲ್ಪ ಮಟ್ಟಿಗೆ ಏರಿಕೆ ಆಗಿದ್ದು, ಹೆಚ್ಚು ವ್ಯತ್ಯಾಸ ಕಂಡುಬರುತ್ತಿಲ್ಲ. ಈ ಮೊದಲು ಹಳ್ಳಿಯಲ್ಲಿ ಗುಡಿಸಲು ಮನೆಗೂ-ಆರ್​ಸಿಸಿ ಕಟ್ಟಡಕ್ಕೂ ಒಂದೇ ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಗುಡಿಸಲಿನಲ್ಲಿ ನೆಲೆಸಿರುವವರು ಬೀದಿ ಕೊಳಾಯಿಯ ನೀರು ಬಳಕೆ ಮಾಡುತ್ತಿದ್ದರೂ ಸಮಾನ ತೆರಿಗೆ ಪಾವತಿಸಬೇಕಿತ್ತು. ಈ ಅಸಮಾನತೆ ಈಗ ತಪ್ಪಿದೆ. ಮಾರ್ಗಸೂಚಿ ದರ ಮತ್ತು ಬಂಡವಾಳ ಹೂಡಿಕೆ ಆಧಾರದ ಮೇಲೆ ತೆರಿಗೆ ನಿಗದಿ ಮಾಡಲಾಗಿದೆ. ಇದು ವೈಜ್ಞಾನಿಕ ತೆರಿಗೆ ವಿಧಾನ ಎಂದು ಕೆಲ ಪಿಡಿಒಗಳು ಸ್ವಾಗತಿಸಿದ್ದಾರೆ.

    ಸ್ಪಂದಿಸುತ್ತಿಲ್ಲ ಪಂಚತಂತ್ರ 2.0

    ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ಪಾವತಿಗೆ ಕೈಬರಹದ ರಸೀದಿ ಕೊಡುವಂತಿಲ್ಲ. ಬದಲಿಗೆ ಪಂಚತಂತ್ರ ತಂತ್ರಾಂಶದಲ್ಲಿಯೇ ರಸೀದಿ ಸೃಷ್ಟಿಸಬೇಕು. ಇತ್ತೀಚೆಗೆ ಪಂಚತಂತ್ರ 2.0 ತಂತ್ರಾಂಶ ಅಪ್​ಡೇಟ್ ಮಾಡಲಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಸರಿಯಾಗಿ ರಸೀದಿ ತೆಗೆಯಲು ಸಾಧ್ಯವಾಗುತ್ತಿಲ್ಲ. ಆಸ್ತಿಯ ಮಾರ್ಗಸೂಚಿ ದರ, ಕಟ್ಟಡ ಮೌಲ್ಯ ಸೇರಿ ಹಲವು ಮಾಹಿತಿ ಅಪ್​ಡೇಟ್ ಮಾಡಿ ರಸೀದಿ ತೆಗೆಯಬೇಕಾಗಿದೆ. ಇದಕ್ಕೆ ತಕ್ಕಂತೆ ತಂತ್ರಾಂಶ ಸಹಕರಿಸುತ್ತಿಲ್ಲ. ಸದಾಕಾಲ ಸರ್ವರ್ ಸಮಸ್ಯೆಯೂ ಕಾಡುತ್ತಿದೆ. ಹೀಗಾಗಿ ಜನರಿಗೆ ಸರಿಯಾದ ಸಮಯಕ್ಕೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲು ನಿರ್ಧಾರ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಗ್ರಾಮೀಣರ ಮೇಲೇಕೆ ಭಿಕ್ಷುಕರ ಸೆಸ್?

    ಪಂಚತಂತ್ರ 2.0 ತಂತ್ರಾಂಶದಲ್ಲಿ ಸೃಷ್ಟಿಸಲಾಗುವ ಕಂದಾಯ ರಸೀದಿಯಲ್ಲಿ ಭೂಮಿಯ ಮೇಲಿನ ತೆರಿಗೆ, ಭಿಕ್ಷುಕರ ಉಪಕರ (ಶೇ.3), ಗ್ರಂಥಾಲಯ ಸೆಸ್ (ಶೇ.6) ಮತ್ತು ಆರೋಗ್ಯ ಸೆಸ್ (ಶೇ.15) ವಸೂಲಿ ಮಾಡಲಾಗುತ್ತಿದೆ. ಹಳ್ಳಿ ಜನರು ಭಿಕ್ಷುಕರ ಸೆಸ್ ಯಾಕೆ ಪಾವತಿ ಮಾಡಬೇಕು? ಈ ಅನಗತ್ಯ ಉಪಕರವನ್ನು ತೆಗೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ.

    ಜಲ ಜೀವನ್ ಮಿಷನ್

    ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಶುಲ್ಕ ಕಡ್ಡಾಯವಾಗಿದೆ. ಗ್ರಾಮಗಳ ಮನೆಗಳಿಗೆ ಹೊಸದಾಗಿ ನೀರಿನ ಪೈಪ್ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸಿ ಶುಲ್ಕ ನಿಗದಿ ಮಾಡಲಾಗುತ್ತಿದೆ. ಇದಲ್ಲದೆ, ಜಲ ಜೀವನ್ ಮಿಷನ್ ಯೋಜನೆಗೆ ವಂತಿಗೆ ನಿಗದಿ ಮಾಡಲಾಗಿದೆ. ಈ ಶುಲ್ಕ ಮತ್ತು ತೆರಿಗೆಯನ್ನು ಪ್ರತ್ಯೇಕವಾಗಿ ವಸೂಲಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts