ಇವರನ್ನು ಯಾರೂ ಸೋಲಿಸಲಾಗದು! ಭಾರತದ ಟೆಸ್ಟ್​ ನಾಯಕ ಸ್ಥಾನಕ್ಕೆ ಹೆಸರು ಸೂಚಿಸಿದ​ ಪೀಟರ್ಸನ್

Kevin
Published on

ನವದೆಹಲಿ: ವಿರಾಟ್​ ಕೊಹ್ಲಿ ಟೆಸ್ಟ್​ ತಂಡದ ನಾಯಕತ್ವಕ್ಕೆ ದಿಢೀರ್​ ರಾಜೀನಾಮೆ ನೀಡಿದ್ದು, ಮುಂದೆ ಯಾರಿಗೆ ನಾಯಕತ್ವದ ಜವಬ್ದಾರಿ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈಗಾಗಲೇ ಹಲವು ಹೆಸರುಗಳು ಚಾಲ್ತಿಯಲ್ಲಿದೆ. ಕೆಲವು ಕ್ರಿಕೆಟ್​ ದಿಗ್ಗಜರು ಕೂಡ ತಮಗೆ ಇಷ್ಟವಾದ ಹೆಸರುಗಳನ್ನು ಸಹ ಸೂಚಿಸುತ್ತಿದ್ದಾರೆ. ಇದೀಗ ಇಂಗ್ಲೆಂಡ್​ ತಂಡದ ಮಾಜಿ ಆಟಗಾರ ಕೆವಿನ್​ ಪೀಟರ್ಸನ್​ ಕೂಡ ಟೀಮ್​ ಇಂಡಿಯಾದ ಓರ್ವ ಆಟಗಾರನನ್ನು ಟೆಸ್ಟ್​ ನಾಯಕತ್ವಕ್ಕೆ ಶಿಫಾರಸು ಮಾಡಿದ್ದಾರೆ.

ಈಗಾಗಲೇ ಏಕದಿನ ಮತ್ತು ಟಿ20 ನಾಯಕತ್ವ ವಹಿಸಿಕೊಂಡಿರುವ ರೋಹಿತ್​ ಶರ್ಮ ಅವರೇ ಟೆಸ್ಟ್​ ನಾಯಕತ್ವಕ್ಕೂ ಸೂಕ್ತ ಎಂಬ ಹೇಳಿಕೆಯನ್ನು ಕೆವಿನ್​ ಪೀಟರ್ಸನ್​ ನೀಡಿದ್ದಾರೆ. ನಾಯಕತ್ವದ ರೇಸ್​ನಲ್ಲಿ ಯಾರೂ ಶರ್ಮರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮೆಚ್ಚುಗೆಯ ಮಾತುಗಳನ್ನು ಪೀಟರ್ಸನ್​ ಆಡಿದ್ದಾರೆ.

ರೋಹಿತ್ ಶರ್ಮ ಭಾರತಕ್ಕೆ ಅತ್ಯುತ್ತಮ ಟೆಸ್ಟ್ ನಾಯಕರಾಗುತ್ತಾರೆ. ಏಕೆಂದರೆ ಅವರ ನಾಯಕತ್ವದ ಗುಣಮಟ್ಟ ತುಂಬಾ ಉತ್ತಮವಾಗಿದೆ. ಅದಕ್ಕೆ ತಾಜಾ ಉದಾಹರಣೆಯಾಗಿ ಅವರು ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಆದ್ದರಿಂದ ಟೆಸ್ಟ್ ನಾಯಕತ್ವದ ಓಟದಲ್ಲಿ ಯಾರೂ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಪೀಟರ್ಸನ್​ ತಿಳಿಸಿದ್ದಾರೆ.

ಕಳೆದ ನವೆಂಬರ್​ನಲ್ಲಿ ಯುಎಇ ಅಲ್ಲಿ ನಡೆದ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಕಳಪೆ ಸಾಧನೆ ತೋರಿತು. ಇದರ ಬೆನ್ನಲ್ಲೇ ಟಿ20 ನಾಯಕತ್ವ ಸ್ಥಾನದಿಂದ ಕೆಳಗಿಳಿಯಲು ನಿರ್ಧಾರ ಮಾಡಿದ್ದರು. ಕಳೆದ ಡಿಸೆಂಬರ್​ನಲ್ಲಿ ರೋಹಿತ್​ ಅವರನ್ನು ಟಿ20 ನಾಯಕರಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಅಲ್ಲದೆ, ಏಕದಿನ ಜವಬ್ದಾರಿಯನ್ನು ಸಹ ಬಿಸಿಸಿಐ ರೋಹಿತ್​ಗೆ ವಹಿಸಿದೆ.

ಕೊಹ್ಲಿ ಬಗ್ಗೆ ಮಾತನಾಡಿರುವ ಪೀಟರ್ಸನ್​, ಕೊಹ್ಲಿ "ಉತ್ತಮ ನಾಯಕ" ಆದರೆ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವು ವೈಯಕ್ತಿಕವಾಗಿರಬೇಕು ಮತ್ತು ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಪೀಟರ್ಸನ್ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net