

ನವದೆಹಲಿ: ಆಸ್ಟ್ರೇಲಿಯಾದ ಆಲ್ರೌಂಡರ್ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಅವರು ಭಾರತೀಯ ಮೂಲದ ಗರ್ಲ್ಫ್ರೆಂಡ್ ವಿನಿ ರಾಮನ್ರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡು ಎರಡು ವರ್ಷಗಳೇ ಕಳೆದಿವೆ. ಆದರೆ, ಇಬ್ಬರು ಯಾವಾಗ ಮದುವೆ ಆಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಲೇ ಇತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ.
ಹೌದು, ಮ್ಯಾಕ್ಸಿ ಮತ್ತು ವಿನಿ ರಾಮನ್ ಮದುವೆ ಆಗುವ ಕಾಲ ಸನ್ನಿಹಿತವಾಗಿದೆ. ಇಬ್ಬರು ಮುಂದಿನ ಮಾರ್ಚ್ 17ರಂದು ಭಾರತೀಯ ಸಂಪ್ರದಾಯಂತೆ ಮದುವೆ ಆಗಲಿದ್ದಾರೆ. ಇಬ್ಬರ ಮದುವೆ ನಿಶ್ವಯವಾಗಿರುವ ಕುರಿತು ತಮಿಳು ಭಾಷೆಯಲ್ಲಿ ಮುದ್ರಿತವಾಗಿರುವ ವೆಡ್ಡಿಂಗ್ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವೆಡ್ಡಿಂಗ್ ಕಾರ್ಡ್ ಫೋಟೋವನ್ನು ನಟಿ ಕಸ್ತೂರಿ ಶಂಕರ್ ಶೇರ್ ಮಾಡಿಕೊಂಡಿದ್ದು, ತಮಿಳು ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ಬರೆದುಕೊಂಡಿದ್ದು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
2017ರಿಂದಲೂ ಡೇಟಿಂಗ್ ನಡೆಸುತ್ತಿದ್ದ ಜೋಡಿ 2020ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತಮ್ಮ ಭಾವಿ ಪತ್ನಿಯೊಂದಿಗೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಫೋಟೋವನ್ನು ಮ್ಯಾಕ್ಸ್ವೆಲ್ ಇನ್ಸ್ಟಾಗ್ರಾಂನಲ್ಲಿ ರಿಂಗ್ ಎಮೋಜಿಯೊಂದಿಗೆ ಪೋಸ್ಟ್ ಮಾಡಿಕೊಂಡಿದ್ದರು. ಫೋಟೋದಲ್ಲಿ ವಿನಿ ರಾಮನ್ ಮ್ಯಾಕ್ಸ್ವೆಲ್ ತೊಡಿಸಿರುವ ರಿಂಗ್ ಅನ್ನು ಪ್ರದರ್ಶಿಸಿದ್ದರು. ಇದಾದ ಬಳಿಕ ಇಬ್ಬರ ನಿಶ್ಚಿತಾರ್ಥ ಸುದ್ದಿ ಹರಿದಾಡಿತ್ತು. ನಂತರ 2020ರ ಮಾರ್ಚ್ ತಿಂಗಳಲ್ಲಿ ಮೆಲ್ಬೋರ್ನ್ನ ಉಪನಗರ ತೋರಕ್ನಲ್ಲಿ ಮ್ಯಾಕ್ಸಿ ಮತ್ತು ವಿನಿ ನಿಶ್ಚಿತಾರ್ಥ ಎರಡು ಕುಟುಂಬದವರ ಸಮ್ಮುಖದಲ್ಲಿ ನಡೆದಿತ್ತು.
ಅಂದಿನಿಂದ ಮದುವೆ ಯಾವಾಗ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು. ಇದೀಗ ಅದಕ್ಕೆ ಉತ್ತರ ಸಿಗುವ ಕಾಲ ಬಂದಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ.
ಅಂದಹಾಗೆ ವಿನಿ ರಾಮನ್ ಅವರು ಆಸ್ಟ್ರೇಲಿಯಾದಲ್ಲಿ ಮೆಡಿಕಲ್ ಸೈನ್ಸ್ ವಿಭಾಗದಲ್ಲಿ ಮೆಂಟನ್ ಗರ್ಲ್ಸ್ ಸೆಕೆಂಡರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದು, ಮೆಲ್ಬೋರ್ನ್ನಲ್ಲಿ ಫಾರ್ಮಸಿಸ್ಟ್ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ತಮಿಳುನಾಡು ಮೂಲದ ವಿನಿ ರಾಮನ್ ಕುಟುಂಬ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದು, ವಿನಿ ಅಲ್ಲಿಯೇ ಹುಟ್ಟಿ ಬೆಳೆದಿದ್ದಾರೆ.
ಇನ್ನು ಮ್ಯಾಕ್ಸ್ವೆಲ್ 2021ರ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದು, ಈ ಬಾರಿಯು ಅವರನ್ನು ಆರ್ಸಿಬಿ ಉಳಿಸಿಕೊಂಡಿದೆ. ಕಳೆದ ಬಾರಿ ಆರ್ಸಿಬಿ ತಂಡದಲ್ಲಿ ಮ್ಯಾಕ್ಸಿ ಉತ್ತ ಪ್ರದರ್ಶನ ನೀಡಿದ್ದರು. (ಏಜೆನ್ಸೀಸ್)