ನನ್ನ ಕೊನೆಯ ಪಂದ್ಯ ಚೆನ್ನೈನಲ್ಲೇ ನಡೆಯಲಿದೆ ಎಂಬ ಸುಳಿವು ಕೊಟ್ಟ ಎಂ.ಎಸ್​. ಧೋನಿ..!

CSK
Published on

ಚೆನ್ನೈ: ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ಆಟಗಾರನಾಗಿಯೇ ವೃತ್ತಿ ಜೀವನವನ್ನು ಮುಗಿಸುವ ಚೆನ್ನೈನಲ್ಲಿ ತಮ್ಮ ಅಂತಿಮ ಆಟವನ್ನು ಆಡುವ ಭರವಸೆಯಿದೆ ಎಂದು ಧೋನಿ ಹೇಳಿಕೊಂಡಿದ್ದಾರೆ.

ನಿನ್ನೆ ಸಿಎಸ್​ಕೆ ಅಧಿಕೃತ ಯೂಟ್ಯೂಬ್​ ಪೇಜ್​ನಲ್ಲಿ ದೀಪಕ್​ ಚಹಾರ್​, ಇಮ್ರಾನ್​ ತಾಹಿರ್​ ಮತ್ತು ಶಾರ್ದುಲ್​ ಠಾಕೂರ್​ ಜತೆ ಲೈವ್​ ಸೆಷನ್​ನಲ್ಲಿ ಪಾಲ್ಗೊಂಡ ಧೋನಿ, ಅಭಿಮಾನಿಗಳೊಂದಿಗೆ ಸಂವಹನ ನಡೆಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಗಸ್ಟ್​ 15ರಂದೇ ಯಾಕೆ ವಿದಾಯ ಘೋಷಣೆ ಮಾಡಿದ್ರಿ ಎಂದು ಧೋನಿಯವರನ್ನು ಅಭಿಮಾನಿಯೊಬ್ಬ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿದ ಧೋನಿ, ನನ್ನ ಅಭಿಮಾನಿಗಳನ್ನು ಭೇಟಿಯಾಗಲು ಬಯಸುತ್ತೇನೆ ಮತ್ತು ಚೆನ್ನೈನಲ್ಲೇ ನನ್ನ ಕೊನೆಯ ಪಂದ್ಯವನ್ನು ಆಡಲು ಬಯಸುತ್ತೇನೆಂದು ಧೋನಿ ಹೇಳಿದರು.

ಧೋನಿಯ ವಿದಾಯದ ಆಟಕ್ಕೆ ಹಾಜರಾಗಲು ಸಾಧ್ಯವಾಗದಿದ್ದಕ್ಕಾಗಿ ಅಭಿಮಾನಿಯೊಬ್ಬರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದಾಗ ಅಭಿಮಾನಿಯನ್ನು ಸಮಾಧಾನಪಡಿಸಿದ ಧೋನಿ, ವಿದಾಯದ ಪಂದ್ಯ ಅಂತಾ ಬಂದಾಗ ಯಾವಾಗಲೂ ನಾನು ಸಿಎಸ್​ಕೆ ಪರ ಆಡುವುದನ್ನು ಬಂದು ನೋಡಬಹುದು ಮತ್ತು ಅದು ನನ್ನ ವಿದಾಯದ ಆಟವಾಗಿರಬಹುದು. ನನಗೆ ವಿದಾಯ ಹೇಳಲು ನೀವು ಇನ್ನೂ ಆ ಅವಕಾಶವನ್ನು ಪಡೆದಿದ್ದೀರಿ. ಆಶಾದಾಯಕವಾಗಿ, ನಾನು ಚೆನ್ನೈಗೆ ಬರುತ್ತೇನೆ ಮತ್ತು ಅಲ್ಲಿ ನನ್ನ ಕೊನೆಯ ಆಟವನ್ನು ಆಡುತ್ತೇನೆ ಮತ್ತು ನಾನು ನನ್ನ ಎಲ್ಲ ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂದಿದ್ದಾರೆ.

ಮುಂದಿನ ವರ್ಷವೂ ಸಿಎಸ್‌ಕೆ ಪರ ಧೋನಿ ಮೈದಾನಕ್ಕಿಳಿಯುವ ಸಾಧ್ಯತೆಯಿದೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ. ಅನುಭವಿ ವಿಕೆಟ್ ಕೀಪರ್ ಐಪಿಎಲ್‌ನಲ್ಲಿ 11 ನೇ ಬಾರಿಗೆ ಸಿಎಸ್‌ಕೆ ಅನ್ನು ಪ್ಲೇಆಫ್‌ಗೆ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಋತುವಿನಲ್ಲಿ 7 ನೇ ಸ್ಥಾನ ಪಡೆದ ನಂತರ, ಧೋನಿ ನೇತೃತ್ವದ ಸಿಎಸ್‌ಕೆ ಈ ಋತುವಿನಲ್ಲಿ ಪ್ಲೇಆಫ್ ಬೆರ್ತ್ ಅನ್ನು ಮುಡಿಗೇರಿಸಿಕೊಂಡ ಮೊದಲ ತಂಡವಾಗಿದ್ದು, ಈ ಬಾರಿಯು ಟ್ರೋಫಿ ಗೆಲ್ಲುವ ಕಡೆ ದೃಷ್ಟಿ ನೆಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net