ಹಬ್ಬದ ಹೊಸ್ತಿಲಲ್ಲೇ ಜನಸಾಮಾನ್ಯರಿಗೆ ದರ ಏರಿಕೆ ಬಿಸಿ: ಗೃಹಬಳಕೆ LPG ಸಿಲಿಂಡರ್​ ಬೆಲೆಯಲ್ಲಿ ಮತ್ತೆ 15 ರೂ. ಏರಿಕೆ

LPG
Published on

ನವದೆಹಲಿ: ಇದಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಶಾಕ್​ ಶಾಕ್​ ಮೇಲೆ ಎದುರಾಗುತ್ತಿದೆ. ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ 15 ರೂಪಾಯಿ ಏರಿಕೆ ಆಗಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ನವರಾತ್ರಿ ಮತ್ತು ದೀಪಾವಳಿ ಆಚರಣೆ ಹೊಸ್ತಿಲಲ್ಲೇ ದರ ಏರಿಕೆಯು ಜನ ಸಾಮಾನ್ಯರಿಗೆ ಹೊರೆಯಾಗಲಿದೆ.

ತೈಲ ಮಾರುಕಟ್ಟೆ ಕಂಪನಿಗಳು ದರ ಏರಿಕೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್ ಪಿಜಿ ಸಿಲೆಂಡರ್ ಬೆಲೆ ಈಗ 899 ರೂಪಾಯಿ 50 ಪೈಸೆಯಾಗಿದೆ. ಇದು ಎರಡು ದಿನಗಳ ಹಿಂದೆ 884 ರೂಪಾಯಿ 50 ಪೈಸೆಯಾಗಿತ್ತು.

ಉಳಿದಂತೆ ವಿವಿಧ ನಗರಗಳ ಎಲ್​ಪಿಜಿ ದರ ಈ ಕೆಳಕಂಡಂತಿದೆ

ಬೆಂಗಳೂರು - 887.50 ರೂ

ಚಂಡೀಗಢ - 894.00 ರೂ

ಜೈಪುರ - 888.50 ರೂ

ಪಾಟ್ನಾ - 974.50 ರೂ

ಕೋಲ್ಕತ್ತಾ - 911.00 ರೂ

ಚೆನ್ನೈ - 900.50 ರೂ

ನೋಯ್ಡಾ - 882.50 ರೂ

ಭುವನೇಶ್ವರ - 886.00 ರೂ

ಹೈದರಾಬಾದ್ - 937.00 ರೂ

ಲಕ್ನೋ - 922.50 ರೂ

ತಿರುವನಂತಪುರಂ - ರೂ 894.00

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ. ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನಿರ್ಧರಿಸುವ ಎರಡು ಪ್ರಮುಖ ಅಂಶಗಳೆಂದರೆ, ಡಾಲರ್‌ ವಿರುದ್ಧ ರೂಪಾಯಿಯ ವಿನಿಮಯ ದರ ಮತ್ತು ಜಾಗತಿಕ ಬೆಂಚ್‌ಮಾರ್ಕ್ ದರವಾಗಿದೆ.

ಕೊನೆಯ ಬಾರಿಗೆ ಸೆಪ್ಟೆಂಬರ್​ 1ರಂದು 25 ರೂ. ಏರಿಸಲಾಗಿತ್ತು. ಸದ್ಯದ ಬೆಲೆ ಏರಿಕೆಯು ಒಂದೇ ತಿಂಗಳೊಳಗೆ ತೈಲ ಮಾರ್ಕೆಟಿಂಗ್ ಕಂಪನಿಗಳು (OMC) ಕೈಗೊಂಡ ಎರಡನೇ ಬೆಲೆ ಏರಿಕೆ ಆಗಿದೆ. ಇನ್ನು ಗೃಹಬಳಕೆ ಸಬ್ಸಿಡಿಯನ್ನು ಸಹ ಸ್ಥಗಿತಗೊಳಿಸಿರುವುದು ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ.

ಈ ವರ್ಷ ಸಿಲಿಂಡರ್‌ ಬೆಲೆ ನಡೆದುಬಂದ ಹಾದಿ ಹೀಗಿದೆ:

ಪ್ರತಿಸಲವೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಗ್ಯಾಸ್ ಸಿಲಿಂಡರ್‌ಗಳ (ಎಲ್‌ಪಿಜಿ ಬೆಲೆ) ಬೆಲೆಯನ್ನು ಬದಲಾಯಿಸುತ್ತವೆ. 2021 ವರ್ಷದ ಆರಂಭದಲ್ಲಿ ಜನವರಿಯಲ್ಲಿ, ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 694 ಇತ್ತು. ಇದನ್ನು ಫೆಬ್ರವರಿಯಲ್ಲಿ ರೂ 719 ಕ್ಕೆ ಏರಿಸಲಾಯಿತು. ಫೆಬ್ರವರಿ 15 ರಂದು ಅದರ ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು.

ಫೆಬ್ರವರಿ 25 ರಂದು ಸಿಲಿಂಡರ್ ಬೆಲೆಯನ್ನು 794 ರೂ.ಗೆ ಏರಿಸಿದ್ದರೆ, ಕಳೆದ ಮಾರ್ಚ್ ತಿಂಗಳಲ್ಲಿ ಇದರ ಬೆಲೆ 819 ರೂ. ಆಯಿತು. ಏಪ್ರಿಲ್ ಆರಂಭದಲ್ಲಿ 10 ರೂಪಾಯಿ ಹೆಚ್ಚಳವಾಗಿತ್ತು. ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಪ್ರತಿ ಸಿಲಿಂಡರ್‌ಗೆ 819 ರೂಪಾಯಿಯಿಂದ 809 ರೂಪಾಯಿಗೆ ಇಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net