

ಢಾಕಾ: ರೋಚಕತೆ ಕಾಯ್ದುಕೊಂಡಿದ್ದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಜವಾಬ್ದಾರಿಯುತ ಇನ್ನಿಂಗ್ಸ್ ನೆರವಿನಿಂದ ಭಾರತ ಗೆಲವು ದಾಖಲಿಸಿಕೊಂಡಿತು. ಬೌಂಡರಿ ಬಾರಿಸುವ ಟೀಂ ಇಂಡಿಯಾದ ಗೆಲುವನ್ನು ಅಧಿಕೃತಗೊಳಿಸಿದರು.
ಭಾರತದ ಗೆಲುವಿಗೆ 145 ರನ್ಗಳ ಸಾಧಾರಣ ಗುರಿಯನ್ನು ಬಾಂಗ್ಲಾದೇಶ ನೀಡಿತ್ತು. ಆದರೆ ಚೇಸಿಂಗ್ ವೇಳೆ ಬಾಂಗ್ಲಾ ಸ್ಪಿನ್ ದಾಳಿಗೆ ಭಾರತದ ಬ್ಯಾಟರ್ಗಳು ಎಡವಿದರು. ಒಂದು ಹಂತದಲ್ಲಿ ಭಾರತ ಸೋತೇ ಬಿಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಸಂಕಷ್ಟದ ಸ್ಥಿತಿಯಲ್ಲಿ ಅಶ್ವಿನ್-ಶ್ರೇಯಸ್ ಜೋಡಿ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. 74 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಎಡವಿದ್ದ ಟೀಂ ಇಂಡಿಯಾಗೆ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ 71 ರನ್ಗಳ ಅರ್ಧಶತಕದ ಜೊತೆಯಾಟದ ಮೂಲಕ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ರೋಚಕ ಜಯ ತಂದುಕೊಟ್ಟರು.
ಆರ್. ಅಶ್ವಿನ್ 42 ರನ್ ಮತ್ತು ಶ್ರೇಯಸ್ ಅಯ್ಯರ್ 28 ರನ್ ಗಳಿಸಿ ಅಜೇಯರಾಗಿ ಉಳಿದರು. ಅಶ್ವಿನ್ ಪಂದ್ರಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಚೇತೇಶ್ವರ್ ಪೂಜಾರ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಅಶ್ವಿನ್ ಮಾತನಾಡುತ್ತಾ, ಬಾಂಗ್ಲಾ ಬೌಲರ್ಗಳು ನಮ್ಮ ಮೇಲೆ ನಿಜವಾದ ಒತ್ತಡವನ್ನೇ ಹೇರಿದರು. ಕಡಿಮೆ ರನ್ ಅಂತರದಲ್ಲಿ ಹೆಚ್ಚು ವಿಕೆಟ್ ಕಳೆದುಕೊಂಡಿದ್ದರಿಂದ ಗೆಲುವಿನ ಅವಕಾಶ ಕಡಿಮೆಯಿತ್ತು. ಹೆಚ್ಚಿನ ಬ್ಯಾಟಿಂಗ್ ಕೂಡ ಉಳಿದರಲಿಲ್ಲ. ಹೀಗಾಗಿ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ನಡೆಸಬೇಕಾಗಿತ್ತು. ಬಾಂಗ್ಲಾ ಬೌಲರ್ಗಳು ಉತ್ತಮ ಲೈನ್ನಲ್ಲಿ ಬೌಲಿಂಗ್ ಮಾಡಿದರು ಎಂದು ಹೇಳಿದರು. (ಏಜೆನ್ಸೀಸ್)