

ಢಾಕಾ: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಗೆಲುವಿನ ರೋಚಕತೆಯನ್ನು ಪಡೆದುಕೊಂಡಿತ್ತು. ಇದೀಗ ಪಂದ್ಯದಲ್ಲಿ ಭಾರತ 3 ವಿಕೆಟ್ಗಳಿಂದ ಜಯ ಸಾಧಿಸುವ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಇದೀಗ ಭಾರತ ಜಯಿಸಿಕೊಂಡಿದೆ. ಚೇಸಿಂಗ್ ವೇಳೆ ಸಂಕಷ್ಟದಲ್ಲಿ ಸಿಲುಕಿದ್ದ ಸಮಯದಲ್ಲಿ ಏಳನೇ ವಿಕೆಟ್ಗೆ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಆರ್.ಅಶ್ವಿನ್ ತಂಡವನ್ನು ಜಯದ ಹಾದಿಯತ್ತ ಕೊಂಡೊಯ್ದರು.
ಭಾರತದ ಗೆಲುವಿಗೆ 145 ರನ್ಗಳ ಸಾಧಾರಣ ಗುರಿಯನ್ನು ಬಾಂಗ್ಲಾದೇಶ ನೀಡಿತ್ತು. ಆದರೆ ಚೇಸಿಂಗ್ ವೇಳೆ ಬಾಂಗ್ಲಾ ಸ್ಪಿನ್ ದಾಳಿಗೆ ಭಾರತದ ಬ್ಯಾಟರ್ಗಳು ಎಡವಿದರು. ಒಂದು ಹಂತದಲ್ಲಿ ಭಾರತ ಸೋತೇ ಬಿಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಸಂಕಷ್ಟದ ಸ್ಥಿತಿಯಲ್ಲಿ ಅಶ್ವಿನ್-ಶ್ರೇಯಸ್ ಜೋಡಿ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. 74 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಎಡವಿದ್ದ ಟೀಂ ಇಂಡಿಯಾಗೆ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ 71 ರನ್ಗಳ ಅರ್ಧಶತಕದ ಜೊತೆಯಾಟದ ಮೂಲಕ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ರೋಚಕ ಜಯ ತಂದುಕೊಟ್ಟರು.
ಆರ್. ಅಶ್ವಿನ್ 42 ರನ್ ಮತ್ತು ಶ್ರೇಯಸ್ ಅಯ್ಯರ್ 28 ರನ್ ಗಳಿಸಿ ಅಜೇಯರಾಗಿ ಉಳಿದರು. ಅಶ್ವಿನ್ ಪಂದ್ರಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಚೇತೇಶ್ವರ್ ಪೂಜಾರ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.