ಆರ್​ಸಿಬಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ಎಬಿ ಡಿವಿಲಿಯರ್ಸ್​..!

abd rcb web
Published on

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರು ಕ್ರಿಕೆಟ್​ ಲೋಕದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇತ್ತೀಚೆಗಷ್ಟೇ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಡಿವಿಲಿಯರ್ಸ್​ ವಿದಾಯ ಹೇಳಿದ್ದಾರೆ. ಅವರ ಅಮೋಘ ಆಟವನ್ನು ಸದಾ ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ದಿಢೀರ್​ ನಿವೃತ್ತಿಯಿಂದಾಗಿ ಆಘಾತವಾಗಿದೆ. ಅದರಲ್ಲೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಪತ್ಬಾಂಧವರಾಗಿದ್ದ ಎಬಿಡಿಯನ್ನು ಆರ್​ಸಿಬಿ ಅಭಿಮಾನಿಗಳು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಎಬಿಡಿ ಗುಡ್​ ನ್ಯೂಸ್​ ಒಂದನ್ನು ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿಡಿ, ಭವಿಷ್ಯದ ಬಗ್ಗೆ ನನಗೆ ಈ ಕ್ಷಣದಲ್ಲಿ ಸ್ಪಷ್ಟತೆ ಇಲ್ಲ. ಆದರೆ, ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಮಹತ್ವದ ಪಾತ್ರ ನಿರ್ವಹಿಸುವ ನಂಬಿಕೆ ಇದೆ. ಕಳೆದ ಕೆಲವು ವರ್ಷಗಳಿಂದ ಒಂದಿಷ್ಟು ಯುವ ಪ್ರತಿಭೆಗಳನ್ನು ಬೆಳೆಸುತ್ತಿರುವ ನಂಬಿಕೆ ಇರುವುದಾಗಿ ಮತ್ತು ಆಟಗಾರರ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಹಾತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದ ಜತೆಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದಲ್ಲಿಯೂ ಮಹತ್ವದ ಪಾತ್ರ ನಿರ್ವಹಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಮುಂದೆ ಏನಾಗುತ್ತದೆ ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲ. ಆದರೆ, ಒಂದಲ್ಲ ಒಂದು ದಿನ ಆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಆಗ ಏನಾಗುತ್ತದೆ ನೋಡೋಣ. ಕಳೆದ ಕೆಲವು ವರ್ಷಗಳಿಂದ, ನಾನು ಸಾಮರ್ಥ್ಯ ಮತ್ತು ಕೌಶಲ್ಯ ಹೊಂದಿರುವ ಕೆಲವು ಯುವಕರನ್ನು ನೋಡಿಕೊಳ್ಳುತ್ತಿದ್ದೇನೆ ಮತ್ತು ಮಾರ್ಗದರ್ಶನ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದೀಗ ಎಬಿ ಡಿವಿಲಿಯರ್ಸ್​ ನೀಡಿದ ಹೇಳಿಕೆ ಕೇಳಿ ಆರ್​ಸಿಬಿ ಅಭಿಮಾನಿಗಳಿಗೆ ತುಂಬಾ ಖುಷಿಯಾಗಿದೆ. ಮತ್ತೆ ಆರ್​ಸಿಬಿಯಲ್ಲೇ ಎಬಿಡಿ ಮುಂದುವರಿಯುವುದನ್ನು ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net