

ನವದೆಹಲಿ: ಲಡಾಖ್ ಗಡಿ ಗಲಾಟೆಯ ಬಳಿಕ ಚೀನಾ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಸಿಸಿಐ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಚೀನಾ ಮೂಲದ ಮೊಬೈಲ್ ಕಂಪನಿ ವಿವೋ ಅನ್ನು ಹೊರಗಿಟ್ಟಿತ್ತು. ಆದರೆ ಇದೀಗ ಹೊಸ ಒಪ್ಪಂದ ಮಾಡಿಕೊಂಡಿರುವ ಡ್ರೀಮ್11 ಕೂಡ ಚೀನಾ ಲಿಂಕ್ ಹೊಂದಿದೆ. ಆದರೂ ಈ ಹೊಸ ಒಪ್ಪಂದವನ್ನು ಬಿಸಿಸಿಐ ಸಮರ್ಥಿಸಿಕೊಂಡಿದೆ.
ಮುಂಬೈ ಮೂಲದ ಡ್ರೀಮ್11 ಭಾರತೀಯರೇ (ಹರ್ಷ ಜೈನ್, ಭವಿತ್ ಸೇತ್) ಸ್ಥಾಪಿಸಿರುವ ಕಂಪನಿ. ಆದರೆ ಚೀನಾ ಮೂಲದ ಟೆನ್ಸೆಂಟ್ ಕಂಪನಿ ಡ್ರೀಮ್11ನಲ್ಲಿ ಹೂಡಿಕೆ ಹೊಂದಿದೆ. ಹೀಗಾಗಿ ಈ ಬಾರಿ ಚೀನಾ ಜತೆಗಿನ ನಂಟು ತೊರೆಯುವ ಬಿಸಿಸಿಐ ಪ್ರಯತ್ನ ಅರ್ಧದಷ್ಟು ಮಾತ್ರ ಈಡೇರಿದಂತಾಗಿದೆ. ಆದರೂ ಬಿಸಿಸಿಐ ಈ ಹೊಸ ಒಪ್ಪಂದಕ್ಕೆ ತನ್ನದೇ ಆದ ರೀತಿಯಲ್ಲಿ ಸಮರ್ಥನೆಗಳನ್ನು ನೀಡಿದೆ.
ಡ್ರೀಮ್11ನಲ್ಲಿ ಚೀನಾ ಕಂಪನಿಯ ಹೂಡಿಕೆ ಕೇವಲ ಶೇ. 10ರಷ್ಟು ಮಾತ್ರ ಇದೆ ಎಂದು ಬಿಸಿಸಿಐ ಈ ಒಪ್ಪಂದವನ್ನು ಅನುಮೋದಿಸಿದೆ. ಅಲ್ಲದೆ ಕಂಪನಿಯ 400ಕ್ಕೂ ಅಧಿಕ ಉದ್ಯೋಗಿಗಳು ಭಾರತೀಯರೇ ಆಗಿದ್ದಾರೆ ಎಂಬುದು ಬಿಸಿಸಿಐ ವಾದವಾಗಿದೆ. ಡ್ರೀಮ್ 11 ಭಾರತೀಯರ ಬಳಕೆಗೆ ಸೀಮಿತವಾಗಿರುವ ಆ್ಯಪ್ ಆಗಿದೆ. ಕಂಪನಿಯ ಹೆಚ್ಚಿನ ಷೇರು ಭಾರತೀಯರದ್ದೇ ಆಗಿದೆ ಎಂದು ಬಿಸಿಸಿಐ ತಿಳಿಸಿದೆ.
2008ರಿಂದಲೂ ಡ್ರೀಮ್11 ಕ್ರಿಕೆಟ್ ಜತೆ ನಂಟು ಹೊಂದಿದೆ. ಡ್ರೀಮ್11 ಐಸಿಸಿ ಜತೆಗೂ ಫ್ಯಾಂಟಸಿ ಕ್ರಿಕೆಟ್ ಒಪ್ಪಂದ ಹೊಂದಿದೆ. ಬಿಸಿಸಿಐ ಜತೆಗೂ ಇಂಥದ್ದೇ ಒಪ್ಪಂದ ಹೊಂದಿತ್ತು. ಇತರ ದೇಶಗಳ ಟಿ20 ಲೀಗ್ಗಳ ಜತೆಗೂ ಒಪ್ಪಂದ ಹೊಂದಿದೆ. ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಈಗ ಡ್ರೀಮ್11 ಜತೆ 222 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ.
ಇತ್ತೀಚೆಗೆ ಪಂಜಾಬ್ನಲ್ಲಿ ನಡೆದ ನಕಲಿ ಟಿ20 ಲೀಗ್ ಪಂದ್ಯದ ಪ್ರಕರಣದಲ್ಲಿ ಡ್ರೀಮ್11 ನಂಟು ಹೊಂದಿತ್ತು. ಪಂಜಾಬ್ನಲ್ಲಿ ನಡೆದ ಪಂದ್ಯವನ್ನು ಶ್ರೀಲಂಕಾದಲ್ಲಿ ನಡೆದ ಪಂದ್ಯದಂತೆ ಪ್ರಸಾರ ಮಾಡಲಾಗಿತ್ತು. ಪಂದ್ಯದಲ್ಲಿ ಡ್ರೀಮ್11 ಲಾಂಛನ ಇರುವ ಕಿಟ್ ಬಳಕೆ ಮಾಡಲಾಗಿತ್ತು. ಈ ಸಂಬಂಧ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ತನಿಖೆ ನಡೆಯುತ್ತಿರುವ ನಡುವೆಯೇ ಬಿಸಿಸಿಐ, ಅದೇ ಕಂಪನಿಯ ಜತೆಗೆ ಒಪ್ಪಂದ ಮಾಡಿಕೊಂಡಿರುವುದು ವಿಪರ್ಯಾಸವೆನಿಸಿದೆ.