

ನವದೆಹಲಿ: ಫ್ಯಾಂಟಸಿ ಸ್ಪೋರ್ಟ್ಸ್ ಆ್ಯಪ್ ಡ್ರೀಮ್11 ಯುಎಇಯಲ್ಲಿ ನಡೆಯಲಿರುವ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಜಯಿಸಿದೆ. ಮಂಗಳವಾರ ನಡೆದ ಅಂತಿಮ ಹಂತದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಡ್ರೀಮ್ 11 ಕಂಪನಿ ಗರಿಷ್ಠ 222 ಕೋಟಿ ರೂ. ಮೊತ್ತದ ಬಿಡ್ ನಡೆಸುವ ಮೂಲಕ ಬಿಸಿಸಿಐನಿಂದ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕು ಪಡೆದುಕೊಂಡಿತು. ಇದರಿಂದಾಗಿ 13ನೇ ಆವೃತ್ತಿಯ ಟೂರ್ನಿಯು 'ಡ್ರೀಮ್11 ಐಪಿಎಲ್' ಎಂದು ಕರೆಸಿಕೊಳ್ಳಲಿದೆ.
ಅಂತಿಮ ಹಂತದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ, ಬೆಂಗಳೂರು ಮೂಲದ ಆನ್ಲೈನ್ ಶಿಕ್ಷಣ ಆ್ಯಪ್ ಮತ್ತು ಈಗಾಗಲೆ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಹೊಂದಿರುವ ಬೈಜುಸ್ ಸಂಸ್ಥೆ 201 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಬೆಂಗಳೂರು ಮೂಲದ ಮತ್ತೊಂದು ಲೈನ್ ಶಿಕ್ಷಣ ಆ್ಯಪ್ ಅನ್ಅಕಾಡೆಮಿ 170 ಕೋಟಿ ರೂ. ಮೊತ್ತದ ಬಿಡ್ ನಡೆಸಿ ಡ್ರೀಮ್11ಗಿಂತ ಹಿಂದೆ ಉಳಿಯಿತು. ಟಾಟಾ ಗ್ರೂಪ್ 180 ಕೋಟಿ ರೂ. ಮೊತ್ತದ ಆರಂಭಿಕ ಬಿಡ್ ಸಲ್ಲಿಸಿದ್ದರೂ, ಅಂತಿಮ ಹಂತದ ಬಿಡ್ ಪ್ರಕ್ರಿಯೆಯಿಂದ ಹೊರಗುಳಿದಿತ್ತು ಎನ್ನಲಾಗಿದೆ.
222 ಕೋಟಿ ರೂ. ಮೊತ್ತದ ಬಿಡ್ ನಡೆಸಿದ ಡ್ರೀಮ್11ಗೆ ಐಪಿಎಲ್ ಶೀರ್ಷಿಕೆ ಪ್ರಾಯೋಕತ್ವ ನೀಡಿರುವುದನ್ನು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ ಮಂಗಳವಾರ ಖಚಿತಪಡಿಸಿದ್ದಾರೆ. 4 ತಿಂಗಳು ಮತ್ತು 13 ದಿನಗಳ ಈ ಶೀರ್ಷಿಕೆ ಪ್ರಾಯೋಜಕತ್ವ 2020ರ ಡಿಸೆಂಬರ್ 31ರವರೆಗೆ ಇರಲಿದೆ. ಈ ಮುನ್ನ ವಿವೋ ಕಂಪನಿ ವಾರ್ಷಿಕ 440 ಕೋಟಿ ರೂ. ಮೊತ್ತದ ಒಪ್ಪಂದ ಹೊಂದಿತ್ತು. ಆದರೆ ಇದೀಗ ಡ್ರೀಮ್11 ಅದಕ್ಕಿಂತ ಅರ್ಧದಷ್ಟು ಮೊತ್ತಕ್ಕೆ ಒಪ್ಪಂದ ಪಡೆದುಕೊಂಡಿದೆ. ಇದರಿಂದಾಗಿ 300-400 ಕೋಟಿ ರೂ. ಮೊತ್ತದ ಒಪ್ಪಂದ ನಿರೀಕ್ಷೆಯಲ್ಲಿದ್ದ ಬಿಸಿಸಿಐ ನಿರಾಸೆ ಅನುಭವಿಸುವಂತಾಗಿದೆ.