

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 12 ವರ್ಷ ಪೂರೈಸಿದ್ದಾರೆ. 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ ಅವರು 19 ವರ್ಷದ ಯುವ ಬ್ಯಾಟ್ಸ್ಮನ್ ಆಗಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು.
ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಗೌತಮ್ ಗಂಭೀರ್ ಜತೆಗೆ ಇನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಿ ಔಟಾಗಿದ್ದರು. ಭಾರತ ತಂಡವೂ 146 ರನ್ಗೆ ಆಲೌಟ್ ಆಗಿದ್ದ ಆ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 8 ವಿಕೆಟ್ಗಳಿಂದ ಸೋಲು ಕಂಡಿತ್ತು. ಆದರೆ ಆ ಬಳಿಕ ಕಳೆದ 12 ವರ್ಷಗಳಲ್ಲಿ ಭಾರತ ತಂಡ ಎಂದೂ ಶ್ರೀಲಂಕಾ ವಿರುದ್ಧ ದ್ವಿಪಕ್ಷೀಯ ಸರಣಿ ಸೋತಿದ್ದಿಲ್ಲ.
ಕಳೆದ 12 ವರ್ಷಗಳಲ್ಲಿ ವಿಶ್ವದ ಸ್ಟಾರ್ ಬ್ಯಾಟ್ಸ್ಮನ್ ಆಗಿ ಬೆಳೆದಿರುವ ವಿರಾಟ್ ಕೊಹ್ಲಿ, ಹಲವಾರು ದಾಖಲೆಗಳ ಒಡೆಯರೂ ಆಗಿದ್ದಾರೆ. ಮೂರೂ ಕ್ರಿಕೆಟ್ ಪ್ರಕಾರಗಳಲ್ಲಿ ಅವರು ರನ್ ಪ್ರವಾಹವನ್ನೇ ಹರಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಮಂಗಳವಾರ ವಿರಾಟ್ ಕೊಹ್ಲಿ 2008ರಿಂದ ನಿರ್ಮಿಸಿರುವ ವಿವಿಧ ದಾಖಲೆಗಳನ್ನು ಟ್ವಿಟರ್ನಲ್ಲಿ ಮೆಲುಕು ಹಾಕಿದೆ. ಬಿಸಿಸಿಐ ಕೂಡ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಅವರ 12 ವರ್ಷಗಳ ವೃತ್ತಿಜೀವನಕ್ಕೆ ಅಭಿನಂದನೆ ಸಲ್ಲಿಸಿದೆ.
12 ವರ್ಷಗಳಲ್ಲಿ ಭಾರತ ತಂಡದ ಪರ 86 ಟೆಸ್ಟ್ ಮತ್ತು 248 ಏಕದಿನ ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 7,240 ಮತ್ತು 11,867 ರನ್ ಸಿಡಿಸಿದ್ದಾರೆ. 82 ಟಿ20 ಪಂದ್ಯಗಳಲ್ಲಿ 2,794 ರನ್ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟಾರೆ 70 (ಟೆಸ್ಟ್ 27, ಏಕದಿನ 43) ಶತಕಗಳನ್ನೂ ಸಿಡಿಸಿದ್ದಾರೆ. ಟೆಸ್ಟ್ನಲ್ಲಿ 22, ಏಕದಿನದಲ್ಲಿ 58 ಮತ್ತು ಟಿ20ಯಲ್ಲಿ 24 ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಮೂರೂ ಕ್ರಿಕೆಟ್ ಪ್ರಕಾರಗಳಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಾರಿಸಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತಿವೇಗದ 8, 9, 10, 11 ಸಾವಿರ ರನ್ ಪೂರೈಸಿದ ವಿಶ್ವದಾಖಲೆ ಕೊಹ್ಲಿ ಹೆಸರಿನಲ್ಲಿದೆ. ದ್ವಿಪಕ್ಷೀಯ ಸರಣಿಯೊಂದರಲ್ಲಿ ಗರಿಷ್ಠ ರನ್ (558 ರನ್, ದಕ್ಷಿಣ ಆಫ್ರಿಕಾ ವಿರುದ್ಧ 2018ರಲ್ಲಿ) ಸಿಡಿಸಿದ ಸಾಧನೆಯೂ ಅವರದಾಗಿದೆ. ರನ್ ಚೇಸಿಂಗ್ ವೇಳೆ ಗರಿಷ್ಠ 26 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. 2018ರಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿವೇಗವಾಗಿ ಸಾವಿರ ರನ್ (11 ಇನಿಂಗ್ಸ್) ಪೂರೈಸಿದ ವಿಶ್ವದಾಖಲೆ ಬರೆದಿದ್ದಾರೆ. ವಿಶ್ವಕಪ್ನಲ್ಲಿ ಸತತ 5 ಇನಿಂಗ್ಸ್ಗಳಲ್ಲಿ 50 ಪ್ಲಸ್ ರನ್ ಬಾರಿಸಿದ ಮೊದಲ ನಾಯಕರೆನಿಸಿದ್ದಾರೆ. ನಾಯಕನಾಗಿ ಅತಿವೇಗವಾಗಿ 3 ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದಾರೆ. ನಾಯಕನಾಗಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ 1460 ರನ್ ಬಾರಿಸಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಠ 6 ಶತಕ ಸಿಡಿಸಿದ ನಾಯಕರೆನಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಅವರು ಕ್ಯಾಲೆಂಡರ್ ವರ್ಷವೊಂದರಲ್ಲಿ (2016) 600ಕ್ಕೂ ಅಧಿಕ ರನ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಿದ್ದಾರೆ. ಟಿ20 ವಿಶ್ವಕಪ್ ಒಂದರಲ್ಲಿ ಗರಿಷ್ಠ 319 ರನ್ (2014ರ ವಿಶ್ವಕಪ್) ಸಿಡಿಸಿದ ದಾಖಲೆ ಹೊಂದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 2014 ಮತ್ತು 2016ರ ಟಿ20 ವಿಶ್ವಕಪ್ಗಳಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಸಂಪಾದಿಸಿದ್ದರು.
ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ 9 ಬಾರಿ 150 ಪ್ಲಸ್ ರನ್ ಬಾರಿಸಿದ ನಾಯಕರೆನಿಸಿದ್ದಾರೆ. ಭಾರತೀಯ ನಾಯಕನಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ 5,142 ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಭಾರತೀಯ ಬ್ಯಾಟ್ಸ್ಮನ್ ಒಬ್ಬ ಗರಿಷ್ಠ 7 ದ್ವಿಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಸತತ 4 ಟೆಸ್ಟ್ ಸರಣಿಗಳಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಿದ್ದಾರೆ. ನಾಯಕನಾಗಿ ಅತಿವೇಗದ 4 ಸಾವಿರ ರನ್ ಪೂರೈಸಿದ ವಿಶ್ವದಾಖಲೆ ಹೊಂದಿದ್ದಾರೆ. ಸತತ 3 ಕ್ಯಾಲೆಂಡರ್ ವರ್ಷಗಳಲ್ಲಿ ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಮತ್ತು ನಾಯಕ ಆಗಿದ್ದಾರೆ.