

ನವದೆಹಲಿ: ಇತ್ತೀಚೆಗೆ ನಿವೃತ್ತಿ ಹೊಂದಿದ ಟೀಮ್ ಇಂಡಿಯಾ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರ ವೃತ್ತಿಜೀವನವನ್ನು ದಿಗ್ಗಜ ರಾಹುಲ್ ದ್ರಾವಿಡ್ ಶ್ಲಾಘಿಸಿದ್ದಾರೆ. ಸೀಮಿತ ಓವರ್ ಕ್ರಿಕೆಟ್ನಲ್ಲಿ ಭಾರತ ತಂಡದ ಯಶಸ್ಸಿನಲ್ಲಿ ಸುರೇಶ್ ರೈನಾ ಅವರ ಪಾತ್ರವೂ ಪ್ರಮುಖವಾದುದು ಎಂದು ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಸುರೇಶ್ ರೈನಾ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರೆ ವೃತ್ತಿಜೀವನದಲ್ಲಿ ಇನ್ನಷ್ಟು ಹೆಚ್ಚು ರನ್ ಗಳಿಸುತ್ತಿದ್ದರು. ಆದರೆ ಅವರು ಅಮೋಘ ಟೀಮ್ ಮ್ಯಾನ್ ಆಗಿ ಉಳಿದರು ಎಂದು ದ್ರಾವಿಡ್ ಪ್ರಶಂಸಿಸಿದ್ದಾರೆ.
ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಬೆನ್ನಲ್ಲೇ ಶನಿವಾರ 33 ವರ್ಷದ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು. ರೈನಾ ಅವರಿಗೆ ಏಕದಿನ ಮತ್ತು ಟೆಸ್ಟ್ ತಂಡದ ಕ್ಯಾಪ್ ನೀಡಿದ್ದ ದ್ರಾವಿಡ್, ಬಿಸಿಸಿಐ ಟ್ವಿಟರ್ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ರೈನಾ ಗುಣಗಾನ ಮಾಡಿದ್ದಾರೆ. 'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ರೈನಾ ಮೇಲಿನ ಕ್ರಮಾಂಕದಲ್ಲಿ ಆಡಿದ್ದರೆ ಅವರ ಅಂಕಿ-ಅಂಶಗಳು ಇನ್ನಷ್ಟು ಉತ್ತಮವಾಗಿರುತ್ತಿದ್ದವು. ಚೆನ್ನೈ ಸೂಪರ್ಕಿಂಗ್ಸ್ ತಂಡದ ಪರ ಮೇಲಿನ ಕ್ರಮಾಂಕದಲ್ಲಿ ಆಡಿರುವುದರಿಂದಲೇ ಅವರು ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಸಿಎಸ್ಕೆ ತಂಡದಲ್ಲಿ ಅವರು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ. ಹೀಗಾಗಿಯೇ ಐಪಿಎಲ್ನಲ್ಲಿ ಅವರು ಹೆಚ್ಚಿನ ರನ್ ಹರಿಸಿದ್ದಾರೆ' ಎಂದು ದ್ರಾವಿಡ್ ವಿವರಿಸಿದ್ದಾರೆ. ಐಪಿಎಲ್ನಲ್ಲಿ ರೈನಾ 193 ಪಂದ್ಯಗಳಲ್ಲಿ 5,368 ರನ್ ಬಾರಿಸಿದ್ದಾರೆ.
'ಕಳೆದ ಒಂದೂವರೆ ದಶಕದಲ್ಲಿ ಭಾರತ ತಂಡ ಏಕದಿನ, ಟಿ20 ಕ್ರಿಕೆಟ್ನಲ್ಲಿ ಕಂಡ ಯಶಸ್ಸಿನಲ್ಲಿ ರೈನಾ ಪಾತ್ರವೂ ಪ್ರಮುಖವಾದುದು. ಅವರು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ವಿಜೇತರು. ಫೀಲ್ಡಿಂಗ್ನಲ್ಲೂ ಅವರ ಕೊಡುಗೆ ಅಪಾರವಾದುದು. ಅವರ ಉತ್ಸಾಹ ಮೈದಾನದಲ್ಲಿ ಫೀಲ್ಡಿಂಗ್ ಗುಣಮಟ್ಟವನ್ನು ಹೆಚ್ಚಿಸಿತ್ತು' ಎಂದು ದ್ರಾವಿಡ್ ಹೇಳಿದ್ದಾರೆ.
13 ವರ್ಷಗಳ ವೃತ್ತಿಜೀವನದಲ್ಲಿ ಭಾರತ ಪರ 18 ಟೆಸ್ಟ್, 226 ಏಕದಿನ ಮತ್ತು 78 ಟಿ20 ಪಂದ್ಯಗಳನ್ನು ಆಡಿರುವ ರೈನಾ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸರಿಸುಮಾರು 8 ಸಾವಿರ ರನ್ ಕಲೆಹಾಕಿದ್ದಾರೆ. 'ಸುರೇಶ್ ರೈನಾ ವೃತ್ತಿಜೀವನದಲ್ಲಿ ಎಲ್ಲ ಕಷ್ಟದ ಕೆಲಸಗಳನ್ನೂ ನಿರ್ವಹಿಸಿದ್ದಾರೆ. ವೃತ್ತಿಜೀವನದ ಹೆಚ್ಚಿನ ಸಮಯ ಅವರು ಕೆಳ ಮಧ್ಯಮ ಕ್ರಮಾಂಕದಲ್ಲೇ ಆಡಿದ್ದಾರೆ. ಕಠಿಣ ಸ್ಥಳದಲ್ಲೇ ಫೀಲ್ಡಿಂಗ್ ನಿರ್ವಹಿಸಿದ್ದಾರೆ. ಕೆಲ ಉಪಯುಕ್ತ ಓವರ್ಗಳನ್ನು ಎಸೆದಿದ್ದಾರೆ ಮತ್ತು ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಯಾವಾಗಲೂ ತಂಡಕ್ಕಾಗಿ ಆಡಿದ್ದಾರೆ' ಎಂದು ದ್ರಾವಿಡ್ ಪ್ರಶಂಸಿಸಿದ್ದಾರೆ.
'ರೈನಾ ಟೆಸ್ಟ್ ಕ್ರಿಕೆಟ್ನ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ್ದರೂ, ಆ ಯಶಸ್ಸನ್ನು ಮುಂದುವರಿಸಲಿಲ್ಲ. ಆದರೆ ಏಕದಿನ ಕ್ರಿಕೆಟ್ನಲ್ಲಿ ಅವರ ಕೊಡುಗೆ ಅಪಾರವಾದುದು' ಎಂದು ದ್ರಾವಿಡ್ ಹೇಳಿದ್ದಾರೆ. ಜೂನಿಯರ್ ದಿನಗಳಿಂದಲೂ ರೈನಾ ಪ್ರತಿಭಾನ್ವಿತ ಆಟಗಾರರಾಗಿದ್ದರು ಎಂದು ನೆನಪಿಸಿಕೊಂಡಿರುವ ದ್ರಾವಿಡ್, '19 ವಯೋಮಿತಿ ಕ್ರಿಕೆಟ್ನಲ್ಲಿ ರೈನಾ ಅತ್ಯುತ್ತಮ ನಿರ್ವಹಣೆ ತೋರಿದ್ದರು. 2004-05ರ ಸಾಲಿನಲ್ಲಿ ಅವರು ಬೆಳಕಿಗೆ ಬಂದಿದ್ದರು. ಅವರು ಭಾರತೀಯ ಕ್ರಿಕೆಟ್ನಲ್ಲಿ ಪ್ರಮುಖ ಆಟಗಾರರಾಗುವ ಲಕ್ಷಣವನ್ನು ಆಗಲೇ ತೋರಿದ್ದರು. ಕಳೆದ ಒಂದೂವರೆ ದಶಕದಲ್ಲಿ ಅವರು ಅದನ್ನು ನಿರೂಪಿಸಿ ತೋರಿಸಿದ್ದಾರೆ' ಎಂದಿದ್ದಾರೆ. ರೈನಾ ವೃತ್ತಿಜೀವನದಲ್ಲಿ 3 ಸರಣಿಗಳಲ್ಲಿ ಭಾರತ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.