

RCB: ಇದೇ ಮೇ.17ರಿಂದ ಪುನಾರಂಭಗೊಂಡ ಐಪಿಎಲ್ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿತಾಗಿ ಸೆಣಸಲು ಸಿದ್ಧವಾಗಿತ್ತು. ಆದರೆ, ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಂದ್ಯ ರದ್ದಾಗಿ, ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಇದು ಆರ್ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದ್ದೇ ಆದರೂ ತಮ್ಮ ಫ್ರಾಂಚೈಸಿಯ ಕೊನೆ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುವುದಿಲ್ಲ ಎಂಬ ಬೇಸರ ಕಾಡಿದೆ.
ರಾಜ್ಯದಲ್ಲಿ ಬಿರುಸಿನ ಮಳೆಯಿರುವ ಹಿನ್ನಲೆ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಸ್ಆರ್ಎಚ್ ವಿರುದ್ಧದ ಪಂದ್ಯವನ್ನು ಲಖನೌಗೆ ಶಿಫ್ಟ್ ಮಾಡಲಾಗಿದೆ. ಇಲ್ಲಿನ ಮೈದಾನದಲ್ಲೇ ಆರ್ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಮಧ್ಯೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿವೆ. ಹಲವು ಕಾರಣಗಳಿಂದ ಆರ್ಸಿಬಿಯಲ್ಲಿದ್ದ ವಿದೇಶಿ ಆಟಗಾರರು ಈಗಾಗಲೇ ತಮ್ಮ ರಾಷ್ಟ್ರೀಯ ತಂಡಗಳನ್ನು ಸೇರಿಕೊಂಡಿದ್ದು, ಮುಂಬರುವ ಐಪಿಎಲ್ ಪಂದ್ಯಗಳಿಗೆ ತಾವು ಅಲಭ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಪ್ಲೇಆಫ್ ಹೊಸ್ತಿಲಲ್ಲಿರುವ ಆರ್ಸಿಬಿಗೆ ಕೊಂಚ ಸಂಕಷ್ಟ ಎದುರಾಗಿದ್ದೇ ಆದರೂ ಟ್ರೋಫಿ ಉತ್ಸಾಹ ಎಂದಿಗಿಂತ ಹೆಚ್ಚಿದೆ. ಈ ಉತ್ಸಾಹ ಇದೀಗ ದುಪ್ಪಟ್ಟಾಗಿದ್ದು, ಮತ್ತೊಬ್ಬ ಸ್ಟಾರ್ ಆಟಗಾರ ತಂಡವನ್ನು ಸೇರಿಕೊಂಡಿದ್ದಾರೆ. ಸತತ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ನ್ಯೂಜಿಲೆಂಡ್ ಆಟಗಾರ ಟಿಮ್ ಸೀಫರ್ಟ್ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಆರ್ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.ಇಂಗ್ಲೆಂಡ್ ಬ್ಯಾಟರ್ ಜಾಕೋಬ್ ಬೆಥೆಲ್ ಬದಲಿಗೆ ಕಿವೀಸ್ ವಿಕೆಟ್ ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ ಅವರನ್ನು ಕರೆದುಕೊಳ್ಳಲಾಗಿದೆ. ನ್ಯೂಜಿಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 66 ಪಂದ್ಯಗಳನ್ನಾಡಿರುವ ಟಿಮ್ ಸೀಫರ್ಟ್ 1,540 ರನ್ ಗಳಿಸಿದ್ದಾರೆ. ಇದೇ ಮೇ.24ರಿಂದ ಆರ್ಸಿಬಿ ಪರ ಕಣಕ್ಕಿಳಿಯಲಿರುವ ಟಿಮ್, ಮುಂಬರುವ ಪಂದ್ಯಗಳಲ್ಲಿ ಹೇಗೆ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).