

Serial Killer: ಸಾಲು ಸಾಲು ಕೊಲೆಗಳನ್ನು ಮಾಡಿ, ಆ ಶವದ ತುಂಡುಗಳನ್ನು ಮೊಸಳೆಗೆ ಆಹಾರವಾಗಿ ಹಾಕುತ್ತಿದ್ದ ಸೀರಿಯಲ್ ಕಿಲ್ಲರ್ ಕಳೆದ ವರ್ಷ ಪೆರೋಲ್ ನಿಂದ ತಪ್ಪಿಸಿಕೊಂಡಿದ್ದ, ಇದೀಗ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
67 ವರ್ಷದ ಆಯುರ್ವೇದ ವೈದ್ಯ ದೇವೇಂದರ್ ಶರ್ಮಾ ಎಂಬ ಸೀರಿಯಲ್ ಕಿಲ್ಲರ್ ಬಹು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದು, ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆ ತುಂಬಿದ ನೀರಿನಲ್ಲಿ ತಾನು ಕೊಂದವರ ದೇಹಗಳನ್ನು ಎಸೆಯುತ್ತಿದ್ದನು. ಹೀಗಾಗಿ ಆ ಶವಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುತ್ತಿರಲಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
2002 ಮತ್ತು 2004ರ ನಡುವೆ ಹಲವಾರು ಟ್ಯಾಕ್ಸಿ ಮತ್ತು ಟ್ರಕ್ ಚಾಲಕರ ಕ್ರೂರ ಹತ್ಯೆಗಳಿಗಾಗಿ ಶರ್ಮಾ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು, ನಂತರ ಆಗಸ್ಟ್ 2023 ರಲ್ಲಿ ಪೆರೋಲ್ ನಿಂದ ತಪ್ಪಿಸಿಕೊಂಡನು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶರ್ಮಾ ಮತ್ತು ಅವನ ಸಹಚರರು ಚಾಲಕರನ್ನು ನಕಲಿ ಪ್ರವಾಸಗಳಿಗೆ ಕರೆಸಿ, ಅವರನ್ನು ಕೊಲೆ ಮಾಡಿ, ಕೊನೆಗೆ ಅವರ ವಾಹನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ನಂತರ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಲು ಶವಗಳನ್ನು ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆ ತುಂಬಿದ ನೀರಿನಲ್ಲಿ ಎಸೆಯಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇವೇಂದರ್ ಶರ್ಮ ಕೇಸ್ ಒಟ್ಟು 27 ಕೊಲೆ, ಅಪಹರಣ ಮತ್ತು ದರೋಡೆ ಪ್ರಕರಣಗಳನ್ನು ಒಳಗೊಂಡಿದೆ. ಸರಣಿ ಹಂತಕನಾಗುವ ಮೊದಲು, ಅವನು 1998ರಿಂದ 2004ರವರೆಗೆ ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ನಡೆಸುತ್ತಿದ್ದನು. 125ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದ.
ಶರ್ಮ ಪೆರೋಲ್‌ನಲ್ಲಿದ್ದಾಗ ಪರಾರಿಯಾಗಿರುವುದು ಇದೇ ಮೊದಲಲ್ಲ. 2020ರಲ್ಲಿ 20 ದಿನಗಳ ಪೆರೋಲ್ ನಂತರ ಅವನು ಹಿಂತಿರುಗಿರಲಿಲ್ಲ. ದೆಹಲಿಯಲ್ಲಿ ಬಂಧಿಸಲ್ಪಡುವ ಮೊದಲು 7 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ. ಜೂನ್ 2023ರಲ್ಲಿ ಅವನಿಗೆ ಎರಡು ತಿಂಗಳು ಪೆರೋಲ್ ನೀಡಲಾಯಿತು. ಆದರೆ ಆಗಸ್ಟ್ 3, 2023ರ ನಂತರ ನಾಪತ್ತೆಯಾಗಿದ್ದನು.
ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಾದ್ಯಂತ ಏಳು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಮತ್ತು ಒಂದು ಪ್ರಕರಣದಲ್ಲಿ ಗುರಗಾಂವ್ ನ್ಯಾಯಾಲಯದಿಂದ ಮರಣದಂಡನೆಯನ್ನೂ ವಿಧಿಸಲಾಯಿತು. 50ಕ್ಕೂ ಹೆಚ್ಚು ಕೊಲೆಗಳಿಗೆ ಅವನು ಕಾರಣನೆಂದು ಅಧಿಕಾರಿ ಹೇಳಿದರು. (ಏಜೆನ್ಸೀಸ್)