

Deepika Padukone: ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಡಾರ್ಲಿಂಗ್ ಪ್ರಭಾಸ್ ಅಭಿನಯಿಸುತ್ತಿರುವ 'ಸ್ಪಿರಿಟ್' ಚಿತ್ರದ ಚಿತ್ರೀಕರಣ ಸದ್ಯ ಭರದಿಂದ ಸಾಗಲು ಸಿದ್ಧವಾಗಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದ ಬಾಲಿವುಡ್ ಬೆಡಗಿ, ನಟಿ ದೀಪಿಕಾ ಪಡುಕೋಣೆ ಇದೀಗ ದಿಢೀರ್ ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಸುದ್ದಿಗಳು ಬಾಲಿವುಡ್ ಮತ್ತು ಟಾಲಿವುಡ್ ಅಂಗಳದಲ್ಲಿ ಭಾರೀ ಸುದ್ದಿಯಾಗಿದೆ.
ಬಾಲಿವುಡ್‌ನ ಉನ್ನತ ನಿರ್ಮಾಣ ಸಂಸ್ಥೆಯಾದ ಟಿ-ಸೀರೀಸ್ ಫಿಲ್ಮ್ಸ್ ಮತ್ತು ಸಂದೀಪ್ ರೆಡ್ಡಿ ಮುಂದಾಳತ್ವದಲ್ಲಿ ಸೆಟ್ಟೇರಿರುವ ಸ್ಪಿರಿಟ್ಗೆ ಪ್ರಭಾಸ್ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಚಿತ್ರದ ಚಿತ್ರೀಕರಣ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆ ಚಿತ್ರ ವಲಯಗಳಿಂದ ವ್ಯಾಪಕವಾಗಿ ಕೇಳಿಬಂದಿತ್ತು. ಇದಕ್ಕೆ ಉತ್ತರಿಸಿದ ಸಂದೀಪ್ ರೆಡ್ಡಿ ವಂಗಾ, ಎಲ್ಲಾ ತಯಾರಿಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. 2025ರ ಡಿಸೆಂಬರ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಮೊದಲ ವೇಳಾಪಟ್ಟಿ ಮೆಕ್ಸಿಕೊದಲ್ಲಿ ನಡೆಯಲಿದೆ ಎಂದು ತಿಳಿಸಿದ್ದರು. ಆದರೆ, ಶೂಟಿಂಗ್ ಶುರುವಿಗೂ ಮುನ್ನವೇ ಇದೀಗ ದೀಪಿಕಾ ಸ್ಪಿರಿಟ್ನಿಂದ ಹೊರಹೋಗಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಅವರ 'ಸ್ಪಿರಿಟ್' ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದ ದೀಪಿಕಾ, ನಿರ್ದೇಶಕರ ಮುಂದೆ ಹಲವು ಷರತ್ತುಗಳನ್ನು ಇಟ್ಟಿದ್ದರು. ಆದರೆ, ಇದನ್ನೆಲ್ಲ ಒಪ್ಪಿಕೊಳ್ಳಲು ಸಂದೀಪ್ ನಿರಾಕರಿಸಿದ್ದಾರೆ. ದುಬಾರಿ ಮೊತ್ತದ ಸಂಭಾವನೆ ಮತ್ತು ಚಿತ್ರದ ಲಾಭಗಳ ಹಂಚಿಕೆ ಸೇರಿದಂತೆ ಇನ್ನಿತರ ವಿಷಯಗಳಿಂದ ನಿರ್ದೇಶಕರು ಮತ್ತು ನಟಿಯ ಮಧ್ಯೆ ಬಿಸಿ ಬಿಸಿ ಮಾತಾಗಿದೆ. ಈ ವಿಚಾರಕ್ಕೆ ಬೇಸರ ಹೊರಹಾಕಿರುವ ಸಂದೀಪ್ ರೆಡ್ಡಿ, ದೀಪಿಕಾರನ್ನು ಚಿತ್ರದ ಭಾಗವಾಗಿ ಉಳಿಸಿಕೊಳ್ಳಲು ಮನಸ್ಸು ಮಾಡಿಲ್ಲ. ಇದೇ ನಟಿಯ ಹೊರ ಹೋಗುವಿಕೆಗೆ ಕಾರಣ ಎಂದು ಸಿನಿ ವರದಿಗಳು ಸೂಚಿಸಿವೆ,(ಏಜೆನ್ಸೀಸ್).