

ನವದೆಹಲಿ: ಐಪಿಎಲ್ 13ನೇ ಆವೃತ್ತಿಗೆ ಪೂರ್ವಭಾವಿಯಾಗಿ ಯುಎಇಯಲ್ಲಿ ಅಭ್ಯಾಸ ಆರಂಭಿಸುವ ಮುನ್ನ ಭಾರತೀಯ ಕ್ರಿಕೆಟಿಗರು ಮತ್ತು ತರಬೇತಿ ಸಿಬ್ಬಂದಿ ಕರೊನಾ ಪರೀಕ್ಷೆಯಲ್ಲಿ ಒಟ್ಟು 5 ಬಾರಿ ನೆಗೆಟಿವ್ ಬರಬೇಕು. ಬಳಿಕ 53 ದಿನಗಳ ಟೂರ್ನಿಯ ವೇಳೆ ಪ್ರತಿ 5 ದಿನಕ್ಕೊಮ್ಮೆ ಕರೊನಾ ವೈರಸ್ ಪರೀಕ್ಷೆ ನಡೆಯಲಿದೆ ಎಂದು ಬಿಸಿಸಿಐ ಸಿದ್ಧಪಡಿಸಿರುವ ಮಾರ್ಗಸೂಚಿಯ ಕರಡುಪ್ರತಿಯಲ್ಲಿ ತಿಳಿಸಲಾಗಿದೆ.
ಐಪಿಎಲ್ ತಂಡಗಳು ಅರಬ್ ದೇಶಕ್ಕೆ ಪ್ರಯಾಣಿಸುವುದಕ್ಕೆ ಮುನ್ನ ಭಾರತದಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಈ ವೇಳೆ 24 ಗಂಟೆಗಳ ಅವಧಿಯಲ್ಲಿ ಎಲ್ಲರನ್ನೂ 2 ಬಾರಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಯಾರಾದರೂ, ಪಾಸಿಟಿವ್ ಬಂದರೆ 14 ದಿನಗಳ ಕ್ವಾರಂಟೈನ್‌ನಲ್ಲಿಡಲಾಗುತ್ತದೆ. ಬಳಿಕ 24 ಗಂಟೆಗಳ ಅವಧಿಯಲ್ಲಿ 2 ಬಾರಿ ನೆಗೆಟಿವ್ ಬಂದರೆ ಮಾತ್ರ ಯುಎಇ ವಿಮಾನವೇರಲು ಅವಕಾಶ ನೀಡಲಾಗುತ್ತದೆ.
ಯುಎಇಗೆ ತೆರಳಿದ ನಂತರವೂ ಎಲ್ಲರೂ ವಾರದ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಈ ವೇಳೆ 3 ಬಾರಿ ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇವೆಲ್ಲದರಲ್ಲೂ ನೆಗೆಟಿವ್ ವರದಿ ಬಂದರೆ ಜೈವಿಕ-ಸುರಕ್ಷಾ ವಾತಾವರಣವನ್ನು ಪ್ರವೇಶಿಸಿ ಅಭ್ಯಾಸ ನಡೆಸಲು ಅವಕಾಶ ನೀಡಲಾಗುತ್ತದೆ. ಯುಎಇಗೆ ತೆರಳಿದ ಮೊದಲ ವಾರ ಕ್ವಾರಂಟೈನ್‌ನಲ್ಲಿ ಇರುವ ವೇಳೆ ಆಟಗಾರರು ಮತ್ತು ಸಿಬ್ಬಂದಿ ಹೋಟೆಲ್‌ನಲ್ಲಿ ಪರಸ್ಪರ ಭೇಟಿಯಾಗಲು ಅವಕಾಶ ಇರುವುದಿಲ್ಲ.
ತಂಡಗಳ ಅಭಿಪ್ರಾಯವನ್ನು ಆಧರಿಸಿ ಈ ಮಾರ್ಗಸೂಚಿಗಳು ಸಣ್ಣ ಬದಲಾವಣೆ ಕಾಣುವ ಸಾಧ್ಯತೆಯೂ ಇದೆ. ಆದರೆ ಆಟಗಾರರು-ಸಿಬ್ಬಂದಿ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ವಿದೇಶಿ ಆಟಗಾರರು ಕೂಡ ಯುಎಇಗೆ ಆಗಮಿಸುವ ಮುನ್ನ 2 ಬಾರಿ ಕರೊನಾ ಪರೀಕ್ಷೆ ಎದುರಿಸಿ ನೆಗೆಟಿವ್ ವರದಿಯೊಂದಿಗೆ ಬರಬೇಕು. ಬಳಿಕ ಯುಎಇಯಲ್ಲೂ 7 ದಿನಗಳ ಅವಧಿಯಲ್ಲಿ ಮೊದಲ, 3ನೇ ಮತ್ತು 6ನೇ ದಿನ ಕರೊನಾ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಪಡೆದುಕೊಳ್ಳಬೇಕು. ಬಿಸಿಸಿಐ ಪರೀಕ್ಷಾ ನಿಯಮಾವಳಿ ಹೊರತಾಗಿ ಫ್ರಾಂಚೈಸಿ ತನ್ನದೇ ಆದ ಪರೀಕ್ಷೆಗಳನ್ನು ನಡೆಸಲು ಅವಕಾಶವಿದೆ. ಜತೆಗೆ ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳನ್ನೂ ಪಾಲಿಸುವುದು ಕಡ್ಡಾಯವಾಗಿರುತ್ತದೆ.