ಐಪಿಎಲ್‌ನಿಂದ ಹಿಂದೆ ಸರಿದ ವಿವೋ, ಜನಾಕ್ರೋಶಕ್ಕೆ ಬೆದರಿದ ಚೀನಾ ಕಂಪನಿ?

ipl china
Published on

ನವದೆಹಲಿ: ಚೀನಾ ವಿರುದ್ಧದ ಜನಾಕ್ರೋಶದ ಹಿನ್ನೆಲೆಯಲ್ಲಿ ವಿವೋ ಮೊಬೈಲ್ ಕಂಪನಿ, ಮುಂಬರುವ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಚೀನಾ ಮೂಲದ ಕಂಪನಿ ಜತೆಗಿನ ಹಾಲಿ ಒಪ್ಪಂದವನ್ನು ಮುಂದುವರಿಸಲು ಬಿಸಿಸಿಐ ಮುಂದಾಗಿದ್ದರೂ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಆಕ್ರೋಶದಿಂದಾಗಿ ವಿವೋ ಈ ವರ್ಷದ ಟೂರ್ನಿಗೆ ಪ್ರಾಯೋಜಕತ್ವ ವಹಿಸದಿರಲು ನಿರ್ಧರಿಸಿದೆ. ಇದರಿಂದಾಗಿ ಬಿಸಿಸಿಐಗೆ ಕೊನೇಕ್ಷಣದಲ್ಲಿ ಈಗ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಕಂಡುಕೊಳ್ಳುವ ಸವಾಲು ಎದುರಾಗಿದೆ.

ವಿವೋ ಕಂಪನಿ 2017ರಲ್ಲಿ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರಂತೆ 2022ರವರೆಗೆ ಪ್ರತಿ ವರ್ಷಕ್ಕೆ ತಲಾ 440 ಕೋಟಿ ರೂ. ಮೊತ್ತವನ್ನು ಬಿಸಿಸಿಐಗೆ ಪಾವತಿಸಬೇಕಾಗಿತ್ತು. ಈ ಒಪ್ಪಂದವನ್ನು ಉಳಿಸಿಕೊಳ್ಳಲು ವಿವೋ ಬಯಸಿದ್ದು, 2021ರಿಂದ 2023ರವರೆಗೆ ಮತ್ತೆ ಐಪಿಎಲ್ ಪ್ರಾಯೋಜಕತ್ವ ವಹಿಸುವುದಾಗಿ ತಿಳಿಸಿದೆ. ಆದರೆ ಚೀನಾ ಜತೆಗಿನ ಗಡಿ ಗಲಾಟೆಯಿಂದಾಗಿ ಉಂಟಾಗಿರುವ ಹಾಲಿ ವರ್ಷದ ಪ್ರಾಯೋಜಕತ್ವ ವಹಿಸಲು ನಿರಾಕರಿಸಿದೆ.

ಐಪಿಎಲ್ 13ನೇ ಆವೃತ್ತಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಿಗದಿಯಾಗಿದೆ. ಭಾರತದಲ್ಲಿನ ಕರೊನಾ ವೈರಸ್ ಹಾವಳಿಯಿಂದಾಗಿ ಟೂರ್ನಿಯನ್ನು ಅರಬ್ ದೇಶಕ್ಕೆ ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net