More

    ಸಿನಿಮಾ ನಿರ್ದೇಶಕಿ ರೂಪಾ ಅಯ್ಯರ್​ಗೆ ಬ್ಲಾಕ್​ಮೇಲ್​! 24 ಗಂಟೆ ಡಿಜಿಟಲ್ ಆರೆಸ್ಟ್

    30 ಲಕ್ಷ ರೂಪಾಯಿ ಬೇಡಿಕೆ ಒಡ್ಡಿದ್ದ ಸೈಬರ್ ಕಳ್ಳರು

    ಬೆಂಗಳೂರು: ಜೆಟ್​ಏರ್​ವೇಸ್ ಸಂಸ್ಥಾಪಕ ನರೇಶ್ ಗೋಯರ್ ಮನಿಲ್ಯಾಂಡ್ರಿಂಗ್ ಪ್ರಕರಣದ ವಿಚಾರಣೆ ನೆಪದಲ್ಲಿ ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಅವರು ಸೈಬರ್ ಕಳ್ಳರ ಡಿಜಿಟಲ್ ಆರೆಸ್ಟ್​ಗೆ ಒಳಗಾಗಿದ್ದು, 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಾಗ ಮೋಸದ ಜಾಲದಿಂದ ತಪ್ಪಿಸಿಕೊಂಡಿದ್ದಾರೆ. ಹೌದು..ಬುಧವಾರ ಮಧ್ಯಾಹ್ನ 2.30ರಿಂದ ಗುರುವಾರ ಬೆಳಗ್ಗೆ 10.45ವರೆಗೂ ಡಿಜಿಟಲ್ ಆರೆಸ್ಟ್​ಗೆ ಒಳಗಾಗಿದ್ದ ರೂಪಾ ಅಯ್ಯರ್ ಅವರು, ‘ವಿಜಯವಾಣಿ’ ಜೊತೆಗೆ ಸೈಬರ್ ಕಳ್ಳರ ಮೋಸದ ಜಾಲದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಗುರುವಾರ ಮಧ್ಯಾಹ್ನ 2.30ಕ್ಕೆ ರೂಪಾ ಅಯ್ಯರ್​ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ‘ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಮಾಡಬೇಕಿದೆ’ ಎಂದು ಹೇಳಿದ್ದಾನೆ. ಗಾಬರಿಗೊಂಡ ರೂಪಾ ಅಯ್ಯರ್, ಇದು ಪರ್ಸನಲ್ ನಂಬರ್ ಬ್ಲಾಕ್ ಮಾಡಿದರೆ ತೊಂದರೆ ಆಗಲಿದೆ ಎಂದು ಪ್ರಶ್ನಿಸಿದಾಗ ‘ನಿಮ್ಮ ಮೊಬೈಲ್ ನಂಬರ್ ದೇಶ ದ್ರೋಹಿ ಚಟುವಟಿಕೆಗೆ ಬಳಕೆ ಆಗುತ್ತಿದೆ’ ಎಂದು ಹೇಳಿದ್ದಾನೆ. ಟ್ರಾಯ್ ಮೇಲಾಧಿಕಾರಿಗೆ ಕನೆಕ್ಟ್ ಮಾಡುವುದಾಗಿ ಮತ್ತೊಬ್ಬ ವ್ಯಕ್ತಿಗೆ ಕಾನ್ ಕಾಲ್ ಮಾಡಿದ್ದಾನೆ. ಮತ್ತೊಂದು ಕರೆ ಸ್ವೀಕರಿಸಿ ‘ನಿಮ್ಮ ಆಧಾರ್ ನಂಬರ್ ಬಳಸಿ ಸಿಮ್ ಖರೀದಿ ಮಾಡಿದ್ದು, ಆ ಸಿಮ್ಳು ದೇಶ ದ್ರೋಹಿ ಕೆಲಸಕ್ಕೆ ಬಳಕೆ ಆಗುತ್ತಿವೆ’ ಎಂದು ಬೆದರಿಸಿದ್ದಾನೆ. ಈ ಬಗ್ಗೆ ಮುಂಬೈ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ವಿಡಿಯೋ ಕಾಲ್ ಮಾಡುವಂತೆ ತಾಕೀತು ಮಾಡಿದ್ದಾನೆ. ವಿಡಿಯೋ ಕಾಲ್ ಮಾಡಿದಾಗ ಮುಂಬೈ ಪೊಲೀಸ್ ಸಮವಸ್ತ್ರದ ನಕಲಿ ಅಧಿಕಾರಿ, ಈ ತಕ್ಷಣ ನಿಮ್ಮನು ಅರೆಸ್ಟ್ ಮಾಡಬೇಕಿದೆ. ನಿಮ್ಮ ಮೇಲೆ ಮನಿಲ್ಯಾಂಡ್ರಿಂಗ್ ಕೇಸ್ ಸಹ ದಾಖಲಾಗಿದೆ. ನರೇಶ್ ಗೋಯಲ್ ಕೇಸ್ ವಿಚಾರಣೆ ವೇಳೆ ದೇಶದಲ್ಲಿ 247 ಜನರನ್ನು ಗುರುತಿಸಲಾಗಿದೆ. ಇದರಲ್ಲಿ ನಿಮ್ಮ ಹೆಸರು ಸಹ ಇದೆ. ಸೆಲೆಬ್ರಿಟಿ ಆದ ಕಾರಣಕ್ಕೆ ಕರ್ನಾಟಕ ಪೊಲೀಸ್​ಗೆ ಹೇಳಿದರೆ ನಿಮ್ಮ ಮರ್ಯಾದೆ ಹೋಗಲಿದೆ. ಜೊತೆಗೆ ದೇಶದ ಭದ್ರತೆ ವಿಚಾರವಾಗಿದೆ. ಯಾವುದೇ ಕಾರಣಕ್ಕೆ ಪಾಲಕರು ಮತ್ತು ಪತಿಗೂ ಮಾಹಿತಿ ನೀಡಬೇಡಿ. ವರ್ಚುವಲ್​ನಲ್ಲಿ 24 ಗಂಟೆಗಳ ವಿಚಾರಣೆ ಮತ್ತು ನಿಗಾ ವಹಿಸಬೇಕಿದೆ. ಬಳಿಕ ನಿರಾಪೇಕ್ಷಣ ಸರ್ಟಿಫಿಕೇಟ್ ಕೊಡುವುದಾಗಿ ಹೇಳಿದ್ದಾರೆ. ಇತ್ತ ಫೋನ್ ಚಾರ್ಜಿಂಗ್ ಹಾಕಿದ ರೂಪಾ ಅಯ್ಯರ್, ವಿಡಿಯೋ ಕಾಲ್ ಆನ್ ಮಾಡಿದ್ದರು. ಮೊದಲೇ ನಿಗದಿಯಾಗಿದ್ದ ದೇವರ ಪೂಜೆ ಮತ್ತು ಹೋಮ ಮಾಡಿದ್ದು, ಅದನ್ನು ಸೈಬರ್ ಕಳ್ಳರು ಗಮನಿಸಿದ್ದಾರೆ.

    ಆನಂತರ ಬ್ಯಾಂಕ್ ಖಾತೆ ವಿವರ, ಅವರ ಟ್ರಸ್ಟ್​ಗಳ ಮತ್ತು ಉದ್ಯಮದ ಮಾಹಿತಿ ಪಡೆದಿದ್ದರು. ಅಷ್ಟೊತ್ತಿಗೆ ರಾತ್ರಿಯಾದ ಕಾರಣ ಮಲಗಬೇಕೆಂದು ರೂಪಾ ಅಯ್ಯರ್ ಹೇಳಿದ್ದಾರೆ. ಅದಕ್ಕೆ ಒಪ್ಪಿದ ಸೈಬರ್ ಕಳ್ಳರು, ವಿಡಿಯೋ ಕಾಲ್ ಆಫ್ ಮಾಡದಂತೆ ಹೇಳಿ ಬೆಳಗ್ಗೆ 9 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಬೆಳಗ್ಗೆ ವಿಡಿಯೋದಲ್ಲಿ ಹಾಜರಾದ ರೂಪಾ ಅಯ್ಯರ್​ಗೆ ನೆಟ್​ಬ್ಯಾಂಕಿಂಗ್ ಬಳಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಇಲ್ಲ ಎಂದಾಗ ಬ್ಯಾಂಕಿಗೆ ಹೋಗಿ 30 ಲಕ್ಷ ರೂ. ಜಮೆ ಮಾಡುವಂತೆ ಸೂಚಿಸಿದ್ದರು. ಅನುಮಾನ ಬಂದು ಪ್ರಶ್ನಿಸಿದಾಗ ಸೈಬರ್ ಕಳ್ಳರ ಬಣ್ಣ ಬಯಲಾಗಿದೆ.

    ಅಣ್ಣಾಮಲೈ ಹೆಸರು ಹೇಳಿದಾಗ ನಡುಕ

    ರೂಪಾ ಅಯ್ಯರ್​ಗೆ ಕರೆ ಮಾಡುವ ಮೊದಲು ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಸೈಬರ್ ಕಳ್ಳರು, ಎಲ್ಲ ಮಾಹಿತಿ ಕಲೆ ಹಾಕಿದ್ದರು. ನಿರ್ದೇಶಕಿ, ಬಿಜೆಪಿಯಲ್ಲಿ ಸಕ್ರಿಯವಾಗಿ ಇರುವುದು ಮತ್ತು ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು ಇರುವುದನ್ನು ತಿಳಿದು ಇದನ್ನೇ ಮುಂದಿಟ್ಟುಕೊಂಡು ಬೆದರಿಸಿದ್ದರು. ಕೊನೆಗೆ ಸೈಬರ್ ಕಳ್ಳರ ಬಣ್ಣ ಬಯಲಾದ ಮೇಲೆ ರೂಪಾ ಅಯ್ಯರ್ ಸಹ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಗ್ಗೆ ಹೇಳಿದಾಗ ಖದೀಮರಿಗೂ ಗೊತ್ತಾಗಿ ಸುಮ್ಮನಾಗಿದ್ದಾರೆ. ಕೊನೆಗೆ ಪ್ರಧಾನಿ, ಬಿಜೆಪಿ ವಿರುದ್ಧ ನಿಂದನೆ ಮಾಡಿ ಫೋನ್ ಕಟ್ ಮಾಡಿದ್ದಾರೆ.

    ನಕಲಿ ನೋಟಿಸ್​ಗಳು

    ವಿಡಿಯೋ ಕಾಲ್​ನಲ್ಲಿ ಇದ್ದಾಗಲೇ ರೂಪಾ ಅಯ್ಯರ್​ಗೆ ಸಿಬಿಐ ಹೆಸರಿನಲ್ಲಿ ನಕಲಿ ನೋಟಿಸ್ ಸಿದ್ದಪಡಿಸಿ ಕಳುಹಿಸಿದ್ದರು. ಇದಾದ ಮೇಲೆ ವಿಚಾರಣೆಗೆ ನಡೆಸಲು ಸುಪ್ರೀಂ ಕೋರ್ಟ್​ನಿಂದ ಅನುಮತಿ ಪಡೆದಿರುವಂತೆ ನೋಟಿಸ್ ಸಿದ್ದಪಡಿಸಿ ಅದಕ್ಕೆ ಸಿಬಿಐ ಪ್ರಾಸಿಕ್ಯೂಟರ್ ವಿಕ್ರಂ ಗೋಸ್ವಾಮಿ ಎಂದು ನಕಲಿ ಸಹಿ ಮಾಡಿ ಕಳುಹಿಡಿದ್ದರು. ಇದರ ಜತೆಗೆ ಜಾರಿ ನಿರ್ದೇಶನಾಲಯ(ಇಡಿ)ಯಿಂದ ಆರೆಸ್ಟ್ ವಾರಂಟ್ ಸಹ ಕಳುಹಿಸಿ ಡಿಜಿಟಲ್ಆರೆಸ್ಟ್ ಮಾಡಿದ್ದರು.

    ಸಹಾಯಕ್ಕೆ ಬಂದ ಸ್ನೇಹಿತರು

    ರಾಷ್ಟ್ರದ ಭದ್ರತೆ, ಸುರಕ್ಷತೆಗೆ ಧಕ್ಕೆ ಉಂಟಾಗಲಿದೆ. ಯಾರಿಗೂ ಹೇಳದಂತೆ ಮೈಂಡ್​ವಾಷ್ ಮಾಡಿದ್ದ ಸೈಬರ್ ಕಳ್ಳರು, 30 ಲಕ್ಷ ರೂ. ಕೇಳಿದಾಗ ಅನುಮಾನ ಬಂದು ತನ್ನ ಪರಿಚಯಸ್ಥ ಅಧಿಕಾರಿಗೆ ಈ ಬಗ್ಗೆ ಕಾಲ್ ಮಾಡಿ ವಿಚಾರಿಸಿದೆ. ಅವರಿಂದ ಇದೊಂದು ಸೈಬರ್ ಕಳ್ಳರ ಟ್ರಾಪ್ ಎಂಬುದು ಗೊತ್ತಾಯಿತು. ಇಡೀ ದಿನ ಅನುಭವಿಸಿದ್ದ ಸಂಕಷ್ಟ ಕೇವಲ 10 ನಿಮಿಷದಲ್ಲಿ ಕಳೆದು ಹೋಯಿತು ಎಂದು ರೂಪಾ ಅಯ್ಯರ್, ಅಭಿಪ್ರಾಯ ತಿಳಿಸಿದ್ದಾರೆ.

    ಅಶ್ಲೀಲ ವಿಡಿಯೋ ವಿವಾದ: ನಟಿ ಜ್ಯೋತಿ ರೈ ಪರ ಫ್ಯಾನ್ಸ್​ ಮಾಡಿಕೊಂಡ ಮನವಿ ಇದು!

    ನಯನತಾರ ಸೇರಿದಂತೆ ಟಾಪ್​​ ನಟಿಯರೊಂದಿಗೆ ಲವ್ವಿ-ಡವ್ವಿ​! ಈ ವದಂತಿಗಳಲ್ಲಿ ಸಿಲುಕಿದ್ದ ಸ್ಟಾರ್​ ನಟ ಈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts