ಈ ಆಸೀಸ್​ ಆಟಗಾರನಿಗೆ ಐಪಿಎಲ್​ ತಪ್ಪಿಸಿಕೊಂಡರೆ ಖುಷಿಯಂತೆ..!

ipl trophy and logo
Published on

ಮೆಲ್ಬೋರ್ನ್​: ವಿಶ್ವ ಕ್ರಿಕೆಟ್​ನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಅತಿ ದೊಡ್ಡ ಹಾಗೂ ಶ್ರೀಮಂತ ಲೀಗ್​ ಎಂದೇ ಹೆಸರಾಗಿದೆ. ಇಂಥ ಲೀಗ್​ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆದರೆ, ಐಪಿಎಲ್​ನಿಂದ ತಪ್ಪಿಸಿಕೊಂಡರೆ ಖುಷಿಯಿಂದ ಮುಂದಿನ ಸರಣಿಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಆಸ್ಟ್ರೆಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​. ಟಿ20 ವಿಶ್ವಕಪ್​ಗೆ ಸಿದ್ಧಗೊಳ್ಳುವುದಕ್ಕಾಗಿಯೇ ಸ್ಟಾರ್ಕ್​ ಐಪಿಎಲ್​ನಿಂದ ಹೊರಗುಳಿದಿದ್ದರು. ಇದೀಗ ಟಿ20 ವಿಶ್ವಕಪ್​ ಕೂಡ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. 30 ವರ್ಷದ ವೇಗಿ ಐಪಿಎಲ್​ನ 2 ಆವೃತ್ತಿಗಳಲ್ಲಿ ಆರ್​ಸಿಬಿ ಪ್ರತಿನಿಧಿಸಿದ್ದರು.

ಟಿ20 ವಿಶ್ವಕಪ್​ಗಾಗಿ ಐಪಿಎಲ್​ನಿಂದ ಹೊರಗುಳಿದಿದ್ದರು.. ಇದೀಗ ಐಪಿಎಲ್​ ಸೆಪ್ಟೆಂಬರ್​ಗೆ ನಿಗದಿಯಾಗಿದ್ದರೂ ಸ್ಟಾರ್ಕ್​ ಮಾತ್ರ ತಮ್ಮ ನಿರ್ಧಾರ ಬದಲಿಸಿಕೊಳ್ಳುತ್ತಿಲ್ಲ. ಐಪಿಎಲ್​ ಬದಲಿಗೆ ಬೇಸಿಗೆಯಲ್ಲಿ ನಡೆಯಲಿರುವ ಸರಣಿಗೆ ಸಿದ್ಧ ನಡೆಸುತ್ತೇನೆ ಎಂದು ಸ್ಟಾರ್ಕ್​ ಹೇಳಿದ್ದಾರೆ. ಮುಂದಿನ ವರ್ಷದ ಐಪಿಎಲ್​ಗೆ ಖಂಡಿತವಾಗಿಯೂ ಆಡಲು ಬಯಸುತ್ತೇನೆ, ನನ್ನ ನಿರ್ಧಾರದ ಬಗ್ಗೆ ಖುಷಿಯಿದೆ ಎಂದು ಹೇಳಿದ್ದಾರೆ. 2018ರ ಐಪಿಎಲ್​ ಹರಾಜಿನಲ್ಲಿ ಸ್ಟಾರ್ಕ್​ ಅವರನ್ನು ಕೆಕೆಆರ್​ ತಂಡ ಕೊಂಡುಕೊಂಡಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಲೀಗ್​ನಿಂದ ಹೊರುಗಳಿದಿದ್ದರು. ಕಳೆದ ನವೆಂಬರ್​ನಲ್ಲಿ ಅವರನ್ನು ಕೆಕೆಆರ್​ ಬಿಡುಗಡೆ ಮಾಡಿತ್ತು. 30 ವರ್ಷದ ಎಡಗೈ ವೇಗಿ ಸದ್ಯ ತವರು ರಾಜ್ಯ ಎನ್​ಎಸ್​ಡಬ್ಲ್ಯು ತಂಡದ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಆಸ್ಟ್ರೆಲಿಯಾ ತಂಡ ಇಂಗ್ಲೆಂಡ್​ ಪ್ರವಾಸವನ್ನು ಮುಂದೂಡಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net