

ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂಬ ವರದಿಗಳ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ(ಪಿಸಿಬಿ) ಐಸಿಸಿಗೆ ಪತ್ರ ಬರೆದಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐನಿಂದ ಲಿಖಿತ ದೃಢೀಕರಣ ಪತ್ರವನ್ನು ಪಡೆಯುವಂತೆ ಜತೆಗೆ ಅದಕ್ಕೆ ಸೂಕ್ತ ಕಾರಣವನ್ನು ನೀಡುವಂತೆ ಪಿಸಿಬಿ ಪತ್ರದಲ್ಲಿ ಉಲ್ಲೇಖಿಸಿದೆ.
ಫೆ.19ರಂದು ಪಾಕಿಸ್ತಾನದ ಮೂರು ತಾಣಗಳಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಬಿಸಿಸಿಐ, ಐಸಿಸಿಗೆ ಕಳೆದ ಶುಕ್ರವಾರವೇ ಪತ್ರದ ಮೂಲಕ ತಿಳಿಸಿದೆ. ಆದರೆ ಭಾರತ ತಂಡ ಹಾಜರಾಗಲು ಯಾಕೆ ಸಾಧ್ಯವಿಲ್ಲ? ಎಂಬುದರ ಕುರಿತು ಪಿಸಿಬಿ ಸಮರ್ಥನೆ ಬಯಸಿದೆ ಎನ್ನಲಾಗಿದೆ. ಟೂರ್ನಿಯ ಆಯೋಜನೆ ಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಆಯೋ ಜಿಸುವ ಐಸಿಸಿಯ ಸಲಹೆಯನ್ನು ನಿರಾಕರಿಸಿದೆ. ಇದರಿಂದಾಗಿ ಸೋಮವಾರ ಟೂರ್ನಿಯ 100 ದಿನಗಳ ಕೌಂಟ್ಡೌನ್ ಕಾರ್ಯಕ್ರಮವನ್ನು, ಐಸಿಸಿವೇಳಾಪಟ್ಟಿಯ ಬಗೆಗಿನ ಗೊಂದಲದಿಂದಾಗಿ ರದ್ದುಗೊಳಿಸಿತ್ತು.
ಆಫ್ರಿಕಾಗೆ ಟೂರ್ನಿ ಶಿಫ್ಟ್?: ಹೈಬ್ರಿಡ್ ಮಾದರಿಯಲ್ಲಿ (ಭಾರತದ ಪಂದ್ಯಗಳು ಪಾಕ್ನಿಂದ ಹೊರಗೆ) ಟೂರ್ನಿ ನಡೆಸುವಂತೆ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಮನವಿ ಮಾಡಿದೆ. ಆದರೆ ಇದನ್ನು ನಿರಾಕರಿಸುತ್ತ ಬಂದಿರುವ ಪಿಸಿಬಿ ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆಯೊಡ್ಡಿದೆ ಎನ್ನಲಾಗಿದೆ. ಬಿಸಿಸಿಐ ನಿಲುವಿನಿಂದ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಆಯೋಜಿ ಸಲು ಐಸಿಸಿ ಚಿಂತನೆ ನಡೆಸಿದೆ. ಐಸಿಸಿ ಒಂದು ವೇಳೆ ಟೂರ್ನಿಯ ಆತಿಥ್ಯವನ್ನು ಪಾಕ್ನಿಂದ ಕಸಿದುಕೊಂಡರೆ, ಅಂಥ ಸಂದರ್ಭದಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ಗುಳಿಯುವುದರ ಜತೆಗೆ ಮುಂಬರುವ ಐಸಿಸಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಟೂರ್ನಿಗಳಲ್ಲಿ ಭಾರತ ವಿರುದ್ಧ ಆಡುವುದಕ್ಕೆ ಪಾಕಿಸ್ತಾನ ನಿರಾಕರಿಸಲಿದೆ ಎಂದು ವರದಿಯಾಗಿದೆ.
ಅಂಧರ ಟಿ20 ವಿಶ್ವಕಪ್ಗೆ ಅನುಮತಿ: ನ. 22 ರಿಂದ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ 4ನೇ ಆವೃತ್ತಿಯ ಅಂಧರ ವಿಶ್ವ ಟಿ20 ಕ್ರಿಕೆಟ್ಗೆ 17 ಆಟಗಾರರ ಭಾರತ ತಂಡವನ್ನು ಹೆಸರಿಸಿದ್ದು, ಕರ್ನಾಟಕ ಲೋಕೇಶ್ ಹಾಗೂ ಸುನೀಲ್ ರಮೇಶ್ ಸ್ಥಾನ ಸಂಪಾದಿಸಿದ್ದಾರೆ. ಭಾರತ ಹಾಲಿ ಚಾಂಪಿಯನ್ ಎನಿಸಿದೆ. ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂಬ ಬೆಳವಣಿಗೆಗಳ ನಡುವೆ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲು ಅಂಧರ ತಂಡಕ್ಕೆ ಕ್ರೀಡಾ ಸಚಿವಾಲಯ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಿದೆ. ಆದರೆ ಗೃಹ ಮತ್ತು ವಿದೇಶಾಂಗ ಸಚಿವಾಲಯದ ಅನುಮತಿಗಾಗಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಕಾಯುತ್ತಿದೆ.